ನ್ಯೂಸ್ ನಾಟೌಟ್: ಕರಾವಳಿಯಲ್ಲಿ ಮೋಜು ಮಸ್ತಿಗೆ ಬಂದ ಹುಡುಗ-ಹುಡುಗಿಯ ಮೊಬೈಲ್ ಚಾಟಿಂಗ್ ಕಿತಾಪತಿಯಿಂದಾಗಿ ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿ ಇಂಡಿಗೋ ವಿಮಾನ ಹಾರಾಟ ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡ ಘಟನೆ ಭಾನುವಾರ (ಆ.೧೪) ನಡೆದಿದೆ.
ಮುಂಬೈ ಹುಡುಗನೊಬ್ಬ ತನ್ನ ಗೆಳತಿಯೊಂದಿಗೆ ಮಂಗಳೂರು ಸುತ್ತಾಟಕ್ಕೆ ಬಂದಿದ್ದ. ಊರೆಲ್ಲ ಸುತ್ತಾಡಿ ಹುಡುಗ ವಾಪಸ್ ಇಂಡಿಗೋ ವಿಮಾನ ಏರಿ ಮುಂಬೈಗೆ ಹೊರಟಿದ್ದ. ಇನ್ನೊಂದು ವಿಮಾನದಲ್ಲಿ ಬೆಂಗಳೂರಿಗೆ ಹೊರಟಿದ್ದ ಹುಡುಗಿ ಬೋರ್ಡಿಂಗ್ ಪಾಸ್ ಪಡೆದುಕೊಂಡು ಪ್ರಯಾಣಿಸುವುದಕ್ಕಾಗಿ ಕಾಯುತ್ತಿದ್ದಳು. ಈ ಸಂದರ್ಭದಲ್ಲಿ ಇಂಡಿಗೊ ವಿಮಾನದಲ್ಲಿ ಕುಳಿತಿದ್ದ ಹುಡುಗ ಹಾಗೂ ಬೆಂಗಳೂರಿನ ವಿಮಾನಕ್ಕಾಗಿ ಕಾಯುತ್ತಿದ್ದ ಹುಡುಗಿ ಪರಸ್ಪರ ಟೈಮ್ ಪಾಸ್ ಗೆ ಮೊಬೈಲ್ ನಲ್ಲಿ ಚಾಟ್ ಮಾಡಿಕೊಂಡಿದ್ದಾರೆ. ಈ ವೇಳೆ ಇಂಡಿಗೋ ವಿಮಾನದೊಳಗಿದ್ದ ಸಹ ಪ್ರಯಾಣಿಕರೊಬ್ಬರು ಇವರ ಚಾಟ್ ಅನ್ನು ನೋಡಿ ಶಾಕ್ ಆಗಿದ್ದಾರೆ ಎಂದು ನ್ಯೂಸ್ ನಾಟೌಟ್ ಗೆ ಮಾಹಿತಿ ಲಭ್ಯವಾಗಿದೆ. ಹೌದು, ಅದರಲ್ಲಿ ‘ಬಾಂಬರ್’, ‘ಚೀಟರ್’ ಎಂದು ಟೈಪ್ ಆಗಿತ್ತು. ಇದರಿಂದ ಶಾಕ್ ಆದ ಅವರು ಇತರರಿಗೂ ಈ ವಿಚಾರ ತಿಳಿಸಿದ್ದಾರೆ. ಒಂದು ಕ್ಷಣ ಯುವಕ ‘ಬಾಂಬರ್’ ಎಂದು ಆತಂಕದ ಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. ತಕ್ಷಣ ವಿಮಾನ ಹಾರಾಟವನ್ನು ನಿಲ್ಲಿಸಲಾಯಿತು. ತಕ್ಷಣ ಸ್ಥಳಕ್ಕೆ ಬಜಪೆ ಪೊಲೀಸರು ಆಗಮಿಸಿ ತನಿಖೆ ನಡೆಸಿದರು. ಈ ವೇಳೆ ಇವರಿಬ್ಬರು ತಮಾಷೆಗಾಗಿ ಹೀಗೆ ಟೈಪ್ ಮಾಡಿಕೊಂಡಿದ್ದಾರೆ ಅನ್ನುವ ವಿಚಾರ ತಿಳಿದಿದೆ. ಇವರಿಬ್ಬರ ಅತಿರೇಕದ ಹಾಗೂ ಹುಚ್ಚು ಟೈಪಿಂಗ್ ನಿಂದಾಗಿ ವಿಮಾನ ನಿಲ್ದಾಣದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಪ್ರಯಾಣಿಕರೊಬ್ಬರು ನ್ಯೂಸ್ ನಾಟೌಟ್ ಜತೆಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ವಿಮಾನ ಪ್ರಯಾಣಿಕರಿಗೆ ಆತಂಕ ತಂದ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನೂ ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗೂ ಈಗಾಗಲೇ ದೂರು ಹೋಗಿದೆ. ಇನ್ನಷ್ಟೇ ಎಫ್ಐಆರ್ ದಾಖಲಾಗಬೇಕಿದೆ ಎಂದು ನ್ಯೂಸ್ ನಾಟೌಟ್ ಗೆ ಮೂಲಗಳು ಮಾಹಿತಿ ನೀಡಿವೆ.