ನ್ಯೂಸ್ ನಾಟೌಟ್: ಬಾಡಿಗೆಗೆ ಮನೆ ಸಿಗುತ್ತಿಲ್ಲ ಎನ್ನುವ ಕಾರಣದಿಂದ ನೊಂದ ಮಂಗಳಮುಖಿಯೊಬ್ಬರು ಈಗ ದಯಾ ಮರಣವನ್ನು ಕೋರಿ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ.
ರಿಹಾನಾ ಅನ್ನುವ ಮಂಗಳಮುಖಿ ಮಡಿಕೇರಿಗೆ ಬಂದು ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಅವರಿಗೆ ಉಳಿದುಕೊಳ್ಳುವುದಕ್ಕೆ ಬಾಡಿಗೆ ಮನೆ ಬೇಕು. ಆದರೆ ಸುತ್ತಮುತ್ತಲಿನ ಯಾರೊಬ್ಬರು ಅವರಿಗೆ ಬಾಡಿಗೆ ಮನೆ ನೀಡುತ್ತಿಲ್ಲ. ಮಂಗಳಮುಖಿ ಅನ್ನುವ ಕಾರಣದಿಂದ ಮನೆ ನಿರಾಕರಿಸಲಾಗುತ್ತಿದೆ. ಈ ಕಾರಣದಿಂದ ನೊಂದಿರುವ ರಿಯಾನಾಗೆ ಮುಂದಿನ ಜೀವನ ಕಾಣದಂತೆ ಆಗಿದೆ, ಬದುಕಲು ನನಗೆ ಇಷ್ಟವಿಲ್ಲ ಹೀಗಾಗಿ ನನಗೆ ದಯಾಮರಣ ನೀಡಬೇಕೆಂದು ಜಿಲ್ಲಾಧಿಕಾರಿ ಸತೀಶ್ ಅವರಿಗೆ ಪತ್ರದ ಮೂಲಕ ರಿಹಾನಾ ಮನವಿ ಮಾಡಿದ್ದಾರೆ. ಈ ಹಿಂದೆಯೇ ಜಿಲ್ಲಾಧಿಕಾರಿಯವರಿಗೆ ನನಗೊಂದು ಮನೆ ನೀಡುವಂತೆ ಮನವಿ ನೀಡಿದ್ದೆ. ಆದರೆ ಅವರು ಅದಕ್ಕೆ ನನಗೆ ಸ್ಪಂದಿಸಿಲ್ಲ, ಮುಂದೆ ಬದುಕುವುದು ಬೇಡ ಎಂದು ನಿರ್ಧರಿಸಿದ್ದೇನೆ, ಹೀಗಾಗಿ ಜಿಲ್ಲಾಧಿಕಾರಿಯವರಿಗೆ ದಯಾಮರಣಕ್ಕಾಗಿ ಅರ್ಜಿ ನೀಡಿದ್ದೇನೆ ಎಂದು ರಿಹಾನಾ ತಿಳಿಸಿದ್ದಾರೆ.