ನ್ಯೂಸ್ ನಾಟೌಟ್ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಬಸ್ ವೊಂದರಲ್ಲಿ ಊರಿನ ಹೆಸರನ್ನೇ ತಪ್ಪಾಗಿ ಮುದ್ರಿಸಿ ಇದೀಗ ಅಪಹಾಸ್ಯಕ್ಕೆ ಗುರಿಯಾಗಿರುವ ಘಟನೆ ವರದಿಯಾಗಿದೆ. ಕೆಎಸ್ಆರ್ಟಿಸಿ ಬಸ್ ಬೋರ್ಡ್ಗಳಲ್ಲಿ ತಪ್ಪುಗಳಿರುವುದನ್ನು ಅನೇಕ ಸಲ ನೋಡಿದ್ದೇವೆ. ಆದರೆ ಈ ಸಲ ಮುದ್ರಿತಗೊಂಡ ಟಿಕೆಟ್ನಲ್ಲಿಯೇ ಕನ್ನಡದ ಕಗ್ಗೊಲೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಊರು ಕಲ್ಲುಗುಂಡಿಯ ಹೆಸರನ್ನು ‘ಕಲಕುಂಡಿ’ ಎಂದು ಕೆಟ್ಟದಾಗಿ ಬರೆದು ಅವಮಾನ ಮಾಡಲಾಗಿದೆ. ಈ ಕುರಿತ ಟಿಕೆಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದ್ದು ಕೆಎಸ್ಆರ್ಟಿಸಿ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅಂದ ಹಾಗೆ ಇಂತಹ ಮಹಾ ಎಡವಟ್ಟು ಆಗಿರುವುದು ಕೊಳ್ಳೇಗಾಲ ಘಟಕಕ್ಕೆ ಸೇರಿದ ಬಸ್ ನಲ್ಲಿ ಆಗಿದೆ ಎಂದು ತಿಳಿದು ಬಂದಿದೆ. ಪ್ರಯಾಣಿಕರೊಬ್ಬರು ಕಲ್ಲುಗುಂಡಿಯಿಂದ ಹತ್ತಿ ಮಡಿಕೇರಿಗೆ ಟಿಕೆಟ್ ತೆಗೆದುಕೊಂಡಿದ್ದಾರೆ. ಟಿಕೆಟ್ ನೋಡಿದ ಪ್ರಯಾಣಿಕರಿಗೆ ಶಾಕ್ ಆಗಿದೆ. ಏಕೆಂದರೆ ಅದರಲ್ಲಿ ಕಲಕುಂಡಿಗೆ ಟಿಕೆಟ್ ನೀಡಲಾಗಿದೆ. ಇಂತಹ ತಪ್ಪುಗಳನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.