ನ್ಯೂಸ್ ನಾಟೌಟ್: ಕೊಡಗು ಸಂಪಾಜೆ ಹೋಬಳಿ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಿಂದಾಗಿ ಕೊಯನಾಡು ಬಳಿಯ ಕಿಂಡಿ ಅಣೆಕಟ್ಟು ಬಳಿ ಮರದ ದಿಮ್ಮಿಗಳು ಸೇತುವೆಗೆ ಅಡ್ಡಲಾಗಿ ಬಂದ ಪರಿಣಾಮ ನದಿಯ ನೀರು ಉಕ್ಕಿ ಅಲ್ಲಿನ 5 ಮನೆಗಳಿಗೆ ಹಾನಿಯಾಗಿದೆ. ಮಳೆ ಹಾನಿ ಪ್ರದೇಶಕ್ಕೆ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಆಗಸ್ಟ್ ಮೊದಲ ವಾರದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಗತ್ಯ ಮುನ್ನೆಚ್ಚರ ವಹಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ಸಂಪಾಜೆ ಬಳಿ ಒಂದು ಮನೆ ತೀವ್ರ ಹಾನಿಯಾಗಿದೆ. ಈ 5 ಮನೆಗಳಲ್ಲಿ ಒಂದು ಮನೆಗೆ ಹೆಚ್ಚಿನ ಹಾನಿಯಾಗಿದ್ದು, 4 ಮನೆಗಳು ಸಾಧಾರಣ ಹಾನಿಯಾಗಿದೆ. ಈ ಹಿನ್ನೆಲೆ ಕೊಯನಾಡು ದೇವಸ್ಥಾನ ಕಲಾ ಮಂದಿರಕ್ಕೆ 5 ಕುಟುಂಬಗಳ 21 ಜನರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕಂದಾಯ ನಿರೀಕ್ಷಕರಾದ ವೆಂಕಟೇಶ್ ಅವರು ಮಾಹಿತಿ ನೀಡಿದ್ದಾರೆ.