ನ್ಯೂಸ್ ನಾಟೌಟ್ : ಕೈಪಡ್ಕ ಸೇತುವೆ ಅಪಾಯದ ಸ್ಥಿತಿಯಲ್ಲಿದೆ ಎಂದು ನ್ಯೂಸ್ ನಾಟೌಟ್ ವರದಿ ಮಾಡಿದ ಬೆನ್ನಲ್ಲೇ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೂರು ಮನೆಗಳಿಗೆ ಅಪಾಯದ ಸ್ಥಿತಿಯನ್ನು ನೋಡಿದ ಅವರು ಅಗತ್ಯ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಸೇತುವೆಯ ವೀಕ್ಷಣೆಯ ಬಳಿಕ ನ್ಯೂಸ್ ನಾಟೌಟ್ ಜತೆಗೆ ಮಾತನಾಡಿದ ಅವರು, ‘ನಮ್ಮ ಗ್ರಾಮದ ಹಲವಾರು ಸೇತುವೆಗಳಲ್ಲಿ ಮರಗಳು, ಕಸಗಳು ಸಿಕ್ಕಿ ಹಾಕಿಕೊಂಡಿದ್ದು ಅವುಗಳ ತೆರವು ಕಾರ್ಯಾಚರಣೆಯನ್ನು ಅತಿ ವೇಗದಲ್ಲಿ ಮಾಡಿದ್ದೇವೆ. ಕಳೆದ ಮೂರು ದಿನಗಳಿಂದ ನಿರಂತರ ಪ್ರವಾಹದಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದ್ದರೂ ನಾವು ಸಮಯದ ಮಿತಿ ಇಲ್ಲದೆ ಕೆಲಸ ಮಾಡುತ್ತಿದ್ದೇವೆ. ಕೈಪಡ್ಕದ ಸೇತುವೆಯಲ್ಲಿ ಬ್ಲಾಕ್ ಆಗಿರುವ ವಿಚಾರ ನ್ಯೂಸ್ ನಾಟೌಟ್ ವರದಿಯಿಂದ ತಿಳಿಯಿತು. ತಕ್ಷಣ ಇಲ್ಲಿಗೆ ಬಂದಿದ್ದೇನೆ. ನಮ್ಮ ಸಿಬ್ಬಂದಿಯನ್ನು ಕರೆದುಕೊಂಡು ಇಂದು ಸಂಜೆಯೊಳಗೆ ಅದನ್ನು ತೆಗೆಸುವ ವ್ಯವಸ್ಥೆ ಮಾಡಲಾಗುತ್ತದೆ. ರೆಡ್ ಅಲರ್ಟ್ ಇರುವುದರಿಂದ ಹೊಳೆಯಲ್ಲಿ ನೀರು ಹೆಚ್ಚು ಬರುವ ಸಾಧ್ಯತೆ ಇದ್ದು ಮೂರು ಮನೆಗಳಿಗೆ ಅಪಾಯವಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.