ನ್ಯೂಸ್ ನಾಟೌಟ್ : ತುಳುನಾಡು, ತುಳು ಭಾಷೆ ಎಂದು ಬಂದಾಗ ಹೆಗಲಿಗೆ ಹೆಗಲುಕೊಟ್ಟು ದುಡಿಯುತ್ತಿದ್ದ ಉದಯ್ ಧರ್ಮಸ್ಥಳ ಇಂದು (ಶುಕ್ರವಾರ) ನಿಧನರಾಗಿದ್ದಾರೆ.
ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಉದಯ್ ಧರ್ಮಸ್ಥಳ ಸನಾತನ ಸಾರಥಿ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಸಾಮಾಜಿಕ ಕೆಲಸಕ್ಕಾಗಿ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ಜೀವನಶ್ರೇಷ್ಠ ಸಾಧನೆಗಾಗಿ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ದೊರಕಿದೆ. ಮೂಲತಃ ಧರ್ಮಸ್ಥಳದವರಾದ ಉದಯ್ ಅವರು ಬಾಲ್ಯದಿಂದಲೂ ಪ್ರತಿಭಾವಂತರಾಗಿದ್ದರು. ಅನೇಕ ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಯಶಸ್ವಿ ಸಂಘಟಕ, ವಾಗ್ಮಿ, ಸಾಹಿತಿ, ಚಿಂತಕ, ಧಾರ್ಮಿಕ ಚಿಂತಕ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರು, ಸರ್ವ ಸಂಘಟನೆಗಳ ಮಾರ್ಗದರ್ಶಕರು ಕೂಡ ಆಗಿದ್ದರು. ತುಳು ಭಾಷೆ ಎಂದು ಬಂದಾಗ ಉದಯ್ ಧರ್ಮಸ್ಥಳ ಮುಂಚೂಣಿಯಲ್ಲಿ ನಿಂತು ಕೆಲಸ ನಿರ್ವಹಿಸುತ್ತಿದ್ದದ್ದು ತುಳುವಿನ ಬಗ್ಗೆ ಅವರಿಗಿದ್ದ ಅಪಾರ ಕಾಳಜಿಗೆ ಸಾಕ್ಷಿಯಾಗಿದೆ.