ನ್ಯೂಸ್ ನಾಟೌಟ್: ದೇಶ-ವಿದೇಶದ ಗಣ್ಯರನ್ನು ಸೆಳೆಯುತ್ತಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಕೂಡ ಒಂದು. ಈ ಕ್ಷೇತ್ರಕ್ಕೆ ಪ್ರತಿ ವರ್ಷವೂ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಶ್ರೀ ಮಂಜುನಾಥ ದರ್ಶನ ಪಡೆದುಕೊಂಡು ಹೋಗುತ್ತಿದ್ದಾರೆ. ಅಂತಹ ಪವಿತ್ರ ಕ್ಷೇತ್ರಕ್ಕೆ ಇದೀಗ ವಿಮಾನಯಾನ ಸೌಲಭ್ಯವೂ ದೊರಕಲಿದೆ ಅನ್ನುವ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.
ಈ ವಿಚಾರವಾಗಿ ಮಾತನಾಡಿದ ವಸತಿ ಸಚಿವ ಸೋಮಣ್ಣ ಹೇಳಿದ್ದು ಹೀಗೆ, ಧರ್ಮಸ್ಥಳದಲ್ಲಿ ಮಿನಿ ವಿಮಾನ ನಿಲ್ದಾಣ ನಡೆಸುವುದಕ್ಕೆ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಜತೆ ಚರ್ಚಿಸಿದ್ದೇವೆ. ಇದಕ್ಕೆ ಬೇಕಾಗುವ ನೂರು ಎಕರೆ ಜಾಗವನ್ನು ಗುರುತಿಸಲು ಮುಂದಿನ ದಿನಗಳಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.
ಮಿನಿ ವಿಮಾನ ನಿಲ್ದಾಣದಲ್ಲಿ ಎಲ್ಲ ವ್ಯವಸ್ಥೆಯೂ ಇರಲಿದೆ. ಬಂದು ಹೋಗುವವರ ತಪಾಸಣೆಯಿಂದ ಹಿಡಿದು ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡಿರಲಿದೆ. ಜತೆಗೆ ನಾಲ್ಕು ಹೆಲಿಪ್ಯಾಡ್ ಗಳ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಒಟ್ಟಿನಲ್ಲಿ ಧರ್ಮಸ್ಥಳಕ್ಕೆ ಬರುವ ರಾಜ್ಯ, ಹೊರರಾಜ್ಯ ಹಾಗೂ ವಿದೇಶಿ ಜನರಿಗೆ ಇನ್ನು ಮುಂದೆ ಬಜಪೆಯಲ್ಲಿ ಇಳಿದು ಹರಸಾಹಸ ಮಾಡಿಕೊಂಡು ಬರುವ ಬದಲು ನೇರವಾಗಿ ಧರ್ಮಸ್ಥಳದಲ್ಲಿ ಬಂದಿಳಿಯುವ ಸುವರ್ಣಾವಕಾಶ ದೊರೆಯಲಿದೆ.