ನ್ಯೂಸ್ ನಾಟೌಟ್ : ಬಿಜೆಪಿ ಯುವ ಮೋರ್ಚಾ ನಾಯಕ, ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಪಾರ್ಥೀವ ಶರೀರದ ಮೆರವಣಿಗೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಕಾರು ಜನರ ಮಧ್ಯೆ ಅಲುಗಾಡಿದ್ದೇಕೆ? ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಸ್ವತಃ ನಳಿನ್ ಕುಮಾರ್ ಕಟೀಲ್ ಒಟ್ಟಾರೆ ಘಟನೆಗೊಂದು ಹೊಸ ವ್ಯಾಖ್ಯಾನ ನೀಡಿದ್ದಾರೆ. ತಮ್ಮ ಕಾರು ಏಕೆ ಅಲುಗಾಡಿತು? ಎನ್ನುವುದಕ್ಕೆ ಸಮಜಾಯಿಷಿ ನೀಡಿದ್ದಾರೆ. ಅಷ್ಟಕ್ಕೂ ಬಿಜೆಪಿ ರಾಜ್ಯಾಧ್ಯಕ್ಷರು ಖಾಸಗಿ ಮಾಧ್ಯಮ ನಡೆಸಿದ ಸಂದರ್ಶನದಲ್ಲಿ ಏನು ಹೇಳಿದ್ರು ಅನ್ನುವುದನ್ನು ನೋಡೋಣ.
ನನ್ನ ಕಾರು ಅಲ್ಲಾಡುವುದಕ್ಕೆ ನಿರ್ಧಿಷ್ಟ ಕಾರಣಗಳಿಲ್ಲ. ಏಕೆಂದರೆ ಅದು ಸಮೂಹದಲ್ಲಿ ಬಂದ ಆಕ್ರೋಶ. ಕಾರ್ಯಕರ್ತರು ಅಂದು ಪ್ರವೀಣ್ ಹತ್ಯೆಯಿಂದ ತೀವ್ರವಾಗಿ ನೊಂದಿದ್ದರು. ಈ ಹಿನ್ನೆಲೆಯಲ್ಲಿ ಕೋಪದಿಂದ ಹಾಗೆ ಮಾಡಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಮುಂದುವರಿದು ಮಾತನಾಡಿದ ಅವರು, ಮೊನ್ನೆಯ ಕಾರು ಅಲುಗಾಡಿದ ಹಾಗೂ ಪಂಕ್ಚರ್ ಆದ ವಿಚಾರಕ್ಕೆ ಪ್ರತ್ಯೇಕವಾಗಿ ರಾಜಕೀಯ ಬಣ್ಣವನ್ನು ಕಲ್ಪಿಸಬೇಕಿಲ್ಲ. ಆ ಸಮಯದಲ್ಲಿ ಅದು ಆಗಬೇಕಿತ್ತು ನಡೆದು ಹೋಯಿತು. ಅದು ಸಹಜ ಕೂಡ ಆಗಿತ್ತು. ನನಗೊಬ್ಬನಿಗೆ ಅಲ್ಲ ನನ್ನ ಜತೆ ಇದ್ದ ಇನ್ನೂ ಮೂರು ವಾಹನಗಳಲ್ಲಿದ್ದವರಿಗೂ ಆಗಿತ್ತು. ಅದೇ ಕಾರಣದಿಂದ ನನ್ನ ಮೇಲೆ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ನನ್ನ ಬದಲಾವಣೆಗೆ ಹೇಳುತ್ತಿದ್ದಾರೆ ಅನ್ನುವುದು ಸುಳ್ಳು. ಆ ತರಹದ ಯಾವುದೇ ಭಾವನೆ ಕರಾವಳಿಯಲ್ಲಿ ಇಲ್ಲ ಅನ್ನುವುದನ್ನು ಸ್ಪಷ್ಟಪಡುತ್ತೇನೆ. ಇನ್ನು ರಾಜ್ಯಾಧ್ಯಕ್ಷರ ಬದಲಾವಣೆ ನಮ್ಮ ಪಕ್ಷದ ನಿಯಮ, ಪ್ರತಿ ಮೂರು ವರ್ಷಕ್ಕೊಮ್ಮೆ ಬದಲಾವಣೆ ನಡೆಯುತ್ತದೆ. ಈ ಸಲವೂ ಅದು ಆಗುತ್ತದೆ. ಅದರಲ್ಲಿ ಹೊಸತ್ತೇನಿದೆ ಎಂದು ಪ್ರಶ್ನಿಸಿದ್ದಾರೆ.
ಪ್ರವೀಣ್ ನೆಟ್ಟಾರ್ ಪಾರ್ಥೀವ ಶರೀರದ ಮೆರವಣಿಗೆ ಸಂದರ್ಭದಲ್ಲಿ ಕಾರಿನಲ್ಲಿ ಬಂದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮಾತ್ರವಲ್ಲ ಕಾರನ್ನು ಜೋರಾಗಿ ಅಲುಗಾಡಿಸಿ ಟೈರ್ ಪಂಕ್ಚರ್ ಮಾಡಿದ್ದರು. ಹಿಂದೂ ಕಾರ್ಯಕರ್ತರ ಸರಣಿ ಸಾವನ್ನು ಸರಕಾರ ಹಾಗೂ ಜನನಾಯಕರು ತಡೆಯುತ್ತಿಲ್ಲ ಅನ್ನುವ ಸಿಟ್ಟಿನಿಂದ ಕಾರ್ಯಕರ್ತರು ಈ ರೀತಿಯಲ್ಲಿ ಅಸಮಾಧಾನ ಹೊರಹಾಕಿದ್ದರು.