ನ್ಯೂಸ್ ನಾಟೌಟ್: ಕೆಲವು ಸಲ ರಸ್ತೆಯ ಮೇಲೆ ವಾಹನವೋ ಅಥವಾ ವಾಹನದ ಮೇಲೆ ರಸ್ತೆಯೋ ಅನ್ನುವುದೇ ಗೊತ್ತಾಗುವುದಿಲ್ಲ. ಸುಳ್ಯ ತಾಲೂಕಿನ ಹಲವು ಕಡೆ ರಸ್ತೆಗಳ ಸ್ಥಿತಿ ಮಳೆಗಾಲದ ಸಮಯದಲ್ಲಂತೂ ತೀರ ಶೋಚನೀಯವಾಗಿದೆ. ಕೆಎಸ್ಆರ್ಟಿಸಿ ಬಸ್ವೊಂದು ಪ್ರಯಾಣದ ವೇಳೆ ಗುಂಡಿಗೆ ಬಿದ್ದ ಪರಿಣಾಮ ಹಿಂಬದಿ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ ಬೆಳ್ಳಾರೆಯ ಯುವಕನ ಸೊಂಟಕ್ಕೆ ಗಂಭೀರ ಏಟು ಬಿದ್ದ ಘಟನೆ ನಡೆದಿದೆ.
ಬೆಳ್ಳಾರೆಯ ತಡೆಗಜೆ ವಿಜಯ ಕುಮಾರ್ ಎಂಬವರು ಸುಳ್ಯದ ಮೊಬೈಲ್ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಆ 17ರಂದು ಕಾರ್ಯ ನಿಮಿತ್ತ ಮಂಗಳೂರಿಗೆ ಹೋಗಿ ವಾಪಾಸ್ ಬೆಳ್ಳಾರೆಗೆ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಬರುತ್ತಿದ್ದರು. ಬಸ್ ಕಲ್ಲಡ್ಕ ಬಳಿ ತಲುಪುತ್ತಿದ್ದಂತೆ ಏಕಾಏಕಿ ರಸ್ತೆಯಲ್ಲಿದ್ದ ಗುಂಡಿಗೆ ಬಿದ್ದು ಎದ್ದಿದೆ. ಬಸ್ ಗುಂಡಿಗೆ ಬಿದ್ದ ರಭಸಕ್ಕೆ ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ವಿಜಯ ಕುಮಾರ್ ರವರು ಸೀಟಿನಿಂದ ಮೇಲಕ್ಕೆ ಎಸೆಯಲ್ಪಟ್ಟು ಬೀಳುವಾಗ ಬಸ್ಸಿನ ರಾಡ್ ಸೊಂಟಕ್ಕೆ ತಾಗಿ ಗಂಭೀರ ಗಾಯಗೊಂಡಿದ್ದಾರೆ. ಸೊಂಟದಿಂದ ಕೆಳಭಾಗ ಸ್ಪರ್ಶ ಕಳೆದುಕೊಂಡು ಬಸ್ಸಿನೊಳಗೆ ಬೊಬ್ಬೆ ಹೊಡೆದರೆನ್ನಲಾಗಿದೆ. ಬಸ್ ನಿಲ್ಲಿಸಿದ ಚಾಲಕ ಗಂಭೀರ ಸ್ಥಿತಿಯಲ್ಲಿದ್ದ ವಿಜಯವನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯ್ ಅವರ ಬೆನ್ನುಹುರಿ ಹಾಗೂ ಕುತ್ತಿಗೆ ಸಮೀಪ ಗಂಭೀರ ಗಾಯಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.