ಲಕ್ನೋ: ಅಯೋಧ್ಯೆಯಲ್ಲಿ ರಾಷ್ಟ್ರಧ್ವಜವನ್ನು ಕಸದ ಗಾಡಿಯ ಮೂಲಕ ವಿತರಣೆ ಮಾಡುತ್ತಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.
ಅಜಾದಿ ಕಿ ಅಮೃತ ಮಹೋತ್ಸವದ ಅಡಿಯಲ್ಲಿ ಮನೆ ಮನೆಯಲ್ಲೂ ಧ್ವಜವೂ ಹಾರಾಡುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಧ್ವಜವನ್ನು ವಿತರಣೆ ಮಾಡುತ್ತಿದ್ದವರು ಕಸದ ಗಾಡಿಯಲ್ಲಿ ಧ್ವಜವನ್ನು ಇಟ್ಟುಕೊಂಡಿದ್ದರು. ಇದರಿಂದಾಗಿ ರಾಷ್ಟ್ರ ಧ್ವಜಕ್ಕೆ ಮಾಡಿದ ಅವಮಾನ ಎಂದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ತಿರಂಗಾ ಯಾತ್ರೆ ಸಾಧು, ಸಂತರ ನೇತೃತ್ವದಲ್ಲಿ ನಡೆದಿದ್ದು, ಅಯೋಧ್ಯೆ ಮುನ್ಸಿಪಲ್ ಕಾರ್ಪೋರೇಷನ್ಗೆ ಸೇರಿದ ವಾಹನ ಇದಾಗಿದೆ ಎನ್ನಲಾಗಿದೆ. ಕಾರ್ಯಕ್ರಮದಲ್ಲಿ ಪೊಲೀಸರು, ಅಧಿಕಾರಿಗಳು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಟ್ವೀಟ್ ಮಾಡಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅಯೋಧ್ಯೆ ಮುನ್ಸಿಪಲ್ ಕಾರ್ಪೊರೇಷನ್ ನೇತೃತ್ವದಲ್ಲಿ ರಾಷ್ಟ್ರಧ್ವಜವನ್ನು ಕಸದ ಟ್ರಕ್ನಲ್ಲಿ ಸಾಗಿಸುವ ಮೂಲಕ ರಾಷ್ಟ್ರಧ್ವಜವನ್ನು ಅವಹೇಳನ ಮಾಡಿದ್ದಾರೆ. ಈ ರೀತಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.