ಪಾಟ್ನಾ: ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಕರು ಹೊಡೆಯಬಾರದು ಎನ್ನುವ ನಿಯಮವಿರುವ ಕಾಲದಲ್ಲಿ ಇಲ್ಲೊಬ್ಬ ಶಿಕ್ಷಕರು ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ್ದಾರೆ. ಶಿಕ್ಷಕ ನೀಡಿರುವ ಏಟು ತಡೆಯಲಾರದೆ ಬಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಪಾಟ್ನಾದ ಧನರುವಾ ಬ್ಲಾಕ್ನಲ್ಲಿ ಈ ಘಟನೆ ನಡೆದಿದ್ದು ವಿಡಿಯೋ ವೈರಲ್ ಆಗುತ್ತಿದೆ.
ಐದು ವರ್ಷದ ಮಗುವನ್ನು ಹೊಡೆಯಲು ಶಿಕ್ಷಕನು ಮೊದಲು ಕಬ್ಬಿನ ಕೋಲು ಬಳಸಿದ್ದಾನೆ. ಹೊಡೆತದ ರಭಸವು ಎಷ್ಟು ಪ್ರಬಲವಾಗಿತ್ತೆಂದರೆ ಕೋಲು ಎರಡು ಭಾಗಗಳಾಗುತ್ತದೆ. ಕಬ್ಬಿನ ಕೋಲು ಮುರಿದ ನಂತರ ಶಿಕ್ಷಕನು ವಿದ್ಯಾರ್ಥಿಗೆ ಕೈಯಿಂದ ಹೊಡೆಯಲು ಪ್ರಾರಂಭಿಸುತ್ತಾನೆ ಹಾಗೂ ಬಾಲಕನ ಕೂದಲನ್ನು ಸಹ ಎಳೆಯುತ್ತಾನೆ. ಹುಡುಗ ನೋವಿನಿಂದ ಅಳುತ್ತಲೇ ಇರುತ್ತಾನೆ ಮತ್ತು ಹೊಡಿಬೇಡಿ ಎಂದು ಶಿಕ್ಷಕರಿಗೆ ಮನವಿ ಮಾಡುತ್ತಾನೆ. ಬಳಿಕ ಬಾಲಕ ನೆಲದ ಮೇಲೆ ಬೀಳುತ್ತಾನೆ, ಆದರೆ ಶಿಕ್ಷಕನು ತನ್ನ ಚಿತ್ರಹಿಂಸೆಯನ್ನು ಮುಂದುವರೆಸುತ್ತಾನೆ. ಈ ವೇಳೆ ಇತರ ವಿದ್ಯಾರ್ಥಿಗಳು ಮಧ್ಯಪ್ರವೇಶಿಸಲು ತುಂಬಾ ಹೆದರುತ್ತಾರೆ. ಜಯಾ ಕೋಚಿಂಗ್ ಕ್ಲಾಸ್ ಟ್ಯೂಷನ್ ಸೆಂಟರ್ ನಲ್ಲಿ ಈ ಘಟನೆ ನಡೆದಿದೆ. ಅಮಾನುಷವಾಗಿ ಥಳಿಸಿದ್ದರಿಂದ ವಿದ್ಯಾರ್ಥಿ ಪ್ರಜ್ಞೆ ತಪ್ಪಿದ್ದು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಮಗುವಿನ ಘೋರ ಸ್ಥಿತಿಯ ಬಗ್ಗೆ ತಿಳಿದಾಗ ಸ್ಥಳೀಯರು ಶಿಕ್ಷಕನನ್ನು ಛೋಟು ಎಂದು ಗುರುತಿಸಿದ್ದು, ಅವನನ್ನು ಹಿಡಿದು ಥಳಿಸಿದರು. ಛೋಟು ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಾರಣ ಈ ರೀತಿ ಮಾಡಿದ್ದಾರೆ ಎಂದು ಕೋಚಿಂಗ್ ಸೆಂಟರ್ ಮಾಲೀಕ ಅಮರಕಾಂತ್ ಕುಮಾರ್ ಹೇಳಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.