ನ್ಯೂಸ್ ನಾಟೌಟ್: ಜನರಿಗೆ ಬೇಕಾಗಿರುವ ಮೂಲಭೂತ ವ್ಯವಸ್ಥೆಗಳಲ್ಲಿ ರಸ್ತೆಗಳು ಕೂಡ ಒಂದು. ಅಂತಹ ರಸ್ತೆಗಳು ಸರಿ ಇಲ್ಲದಿದ್ದರೆ ಸಹಜವಾಗಿಯೇ ಜನರಿಗೆ ಆಕ್ರೋಶ ಬರುತ್ತದೆ. ಇದೀಗ ಹರಿಹರ ಪಲ್ಲತ್ತಡ್ಕ -ಐನಕಿದು-ಸುಬ್ರಹ್ಮಣ್ಯ ರಸ್ತೆಯ ಅಭಿವೃದ್ಧಿಗೆ ಆಗ್ರಹಿಸಿ ಐದು ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದಾರೆ. ಈ ಕುರಿತ ಫಲಕವೊಂದು ಇದೀಗ ಐನಕಿದು ಬಳಿ ಕಾಣಿಸಿಕೊಂಡಿದ್ದು ಜವಾಬ್ದಾರಿ ಹೊತ್ತ ರಾಜಕಾರಣಿಗಳ ವಿರುದ್ಧ ಗ್ರಾಮಸ್ಥರ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕದಿಂದ ಹಾಗೂ ಹೊಸದಾಗಿ ಕಡಬ ತಾಲೂಕಿಗೆ ಸೇರ್ಪಡೆಯಾದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಐನಕಿದು ಗ್ರಾಮದ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೇವಲ ೮ ಕಿ.ಮೀ. ಸಂಪರ್ಕಿಸುವ ರಸ್ತೆಯಾಗಿದೆ. ಕಲ್ಮಕಾರು, ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ, ಬಾಳುಗೋಡು, ಐನಕಿದು ಈ ಐದು ಗ್ರಾಮಗಳಿಂದ ಅತೀ ಹೆಚ್ಚು ವಾಹನ ಸಂಚಾರವಿದೆ. ಈ ರಸ್ತೆಗಳು ಭಾರಿ ಪ್ರಮಾಣದಲ್ಲಿ ಹಾಳಾಗಿದೆ. ಬಸ್ ಗಳು ಅಲ್ಲಿ ಕೆಸರಿನಲ್ಲಿ ಹೂತು ನಿಲ್ಲುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು, ವಯಸ್ಸಾದವರು, ಕೆಲಸಕ್ಕೆ ಹೋಗುವವರು ಪರದಾಡುವಂತಾಗಿದೆ. ಅಲ್ಲದೆ ಕುಕ್ಕೆ ಸುಬ್ರಹ್ಮಣ್ಯದಿಂದ ಐನಕಿದು, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಗಾಳಿಬೀಡು ಮಾರ್ಗವಾಗಿ ಮಡಿಕೇರಿ ಸಂಪರ್ಕಿಸುವ ರಸ್ತೆ ಇನ್ನೂ ಆಗಿಲ್ಲ ಅನ್ನುವ ನೋವು ಗ್ರಾಮಸ್ಥರಲ್ಲಿದೆ.