ನ್ಯೂಸ್ ನಾಟೌಟ್: ಸುಳ್ಯದಂತಹ ಬೆಳೆಯುತ್ತಿರುವ ಮಿನಿ ನಗರಕ್ಕೆ ದಿನದ ೨೪ ಗಂಟೆಯೂ ವಿದ್ಯುತ್ ಅತ್ಯಾವಶ್ಯಕ. ಇಲ್ಲಿನ ಹಲವಾರು ಕೆಲಸಗಳು ವಿದ್ಯುತ್ ಅನ್ನೇ ಅವಲಂಭಿಸಿದೆ. ಹೀಗಿರುವಾಗ ಪದೇ..ಪದೇ ವಿದ್ಯುತ್ ಹೋದರೆ ಆ ಕೆಲಸವನ್ನೇ ನಂಬಿ ಬದುಕುವವರು ಏನು ಮಾಡೋದು. ಇಂದು (ಸೋಮವಾರ) ಕೂಡ ಪಂಜಿ ಗುಂಡಿ ಎಂಬಲ್ಲಿ ಭಾರಿ ಗಾತ್ರದ ಮರ ಬಿದ್ದು ವಿದ್ಯುತ್ ನಾಪತ್ತೆಯಾಗಿದೆ. ಸಂಜೆ ಬರುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ವತಃ ಮೆಸ್ಕಾಂ ಕೂಡ ಪ್ರಕಟಣೆ ಹೊರಡಿಸಿದೆ.
ಮಳೆಗಾಲದ ಸಮಯದಲ್ಲಿ ಸಮೀಪದ ಆನೆಗುಂಡಿಯಲ್ಲಿ ವಾರಕ್ಕೆ ಎರಡು ಸಲ ಮರ ಬಿದ್ದು ಕಂಬ ತುಂಡಾಗಿ ವಿದ್ಯುತ್ ಇಲ್ಲದಾಗುತ್ತದೆ. ಅತ್ತ ಲೈನ್ ಮ್ಯಾನ್ಗಳು ಮಳೆಯನ್ನೂ ಲೆಕ್ಕಿಸದೆ ದಿನವಿಡೀ ಶ್ರಮವಹಿಸಿ ಬಂದು ಸುಧಾರಿಸಿಕೊಳ್ಳುವಷ್ಟರಲ್ಲಿ ಮತ್ತೆ ಮರ ಬಿದ್ದು ಕಂಬ ಕಟ್ ಆಗಿದೆ ಎನ್ನುವ ವಾರ್ತೆ ಬರುತ್ತದೆ. ಹೀಗೆ ಕಳೆದ ಶುಕ್ರವಾರ, ಶನಿವಾರವೂ ಇದೇ ರೀತಿಯ ಸಮಸ್ಯೆಯಾಗಿ ಕೆಲವು ಕಡೆ ಕುಡಿಯುವ ನೀರಿಗೂ ನಗರದ ಜನರು ಪರದಾಟ ನಡೆಸಿದ್ದರು.
ಎಲ್ಲ ಸರಿ ಇದ್ದರೂ ಸುಳ್ಯದಲ್ಲಿ ಕರೆಂಟ್ ಇರುತ್ತದೆ ಎನ್ನುವುದಕ್ಕೆ ಸಾಧ್ಯವಿಲ್ಲ. ದಿನಕ್ಕೆ ಹತ್ತು ಸಲ ಹೋಗುವುದು ಮತ್ತೆ ಬರುವುದು ಐದು ನಿಮಿಷ ಇರುವುದು ಹೋಗುವುದು ಆಗುತ್ತಲೇ ಇರುತ್ತದೆ. ಹೀಗೆ ಕಣ್ಣಾಮುಚ್ಚಲೆ ಆಡುವ ಕರೆಂಟ್ ಗೆ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ. ಅದರಲ್ಲೂ ಮನೆಯಲ್ಲಿ ಓದುವ ಮಕ್ಕಳಿಗೆ ಕ್ಯಾಂಡಲ್ ಅಥವಾ ದೀಪದ ಬೆಳಕಿನಲ್ಲಿಯೇ ಓದುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.