ನ್ಯೂಸ್ ನಾಟೌಟ್: ಬಿಜೆಪಿ ಯುವ ಮೋರ್ಚಾ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಬಳಿಕ ತಡವಾಗಿಯಾದರೂ ಒಬ್ಬೊಬ್ಬರೇ ಬಿಜೆಪಿ ಮುಖಂಡರು ಕುಟುಂಬದವರನ್ನು ಭೇಟಿಯಾಗಿ ಸಾಂತ್ವಾನ ಹೇಳುವ ಕೆಲಸ ಮಾಡುತ್ತಿದ್ದಾರೆ.
ಅಂತೆಯೇ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳ ಸುರಿಮಳೆ ಸುರಿದ ಬಳಿಕ ಎಚ್ಚೆತ್ತುಕೊಂಡು ಶನಿವಾರ ಮೃತ ಪ್ರವೀಣ್ ಮನೆಗೆ ಓಡೋಡಿ ಬಂದ ಡಿವಿ ಸದಾನಂದ ಗೌಡರಿಗೆ ಪ್ರವೀಣ್ ಅವರ ಪತ್ನಿ ಚೆನ್ನಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ಸರಿಯಾಗಿ ಗೊತ್ತಿರಲಿಲ್ಲ. ಇಂದು ಗೊತ್ತಾಯಿತು ಎಂದು ಡಿವಿ ಹೇಳುತ್ತಿದ್ದಂತೆ ಪ್ರವೀಣ್ ಪತ್ನಿ ಡಿವಿಯವರನ್ನು ತರಾಟೆಗೆ ಎತ್ತಿಕೊಳ್ಳಲು ಆರಂಭಿಸಿದರು. ‘ನಿಮಗೆ ಎಷ್ಟು ಜವಾಬ್ದಾರಿ ಇದೆ ಎನ್ನುವುದು ಇಲ್ಲೇ ಗೊತ್ತಾಗುತ್ತದೆ’ ಎಂದರು. ಆಗ ಉತ್ತರಿಸಿದ ಸದಾನಂದ ಗೌಡರು, ‘ಯಾರಾದರೂ ನನಗೆ ಹೇಳಿದರೆ ಗೊತ್ತಾಗುತ್ತದೆ. ಇಲ್ಲದಿದ್ದರೆ ಹೇಗೆ ಗೊತ್ತಾಗುತ್ತದೆ’ ಎಂದರು. ‘ನೀವು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ನಿಮ್ಮ ಊರಿನ ಒಬ್ಬ ಕಾರ್ಯಕರ್ತನಿಗೆ ಹೀಗೆ ಆಗುವಾಗ ನೀವು ಸುಮ್ಮನಿದ್ರಾ? ಇದನ್ನು ನೀವು ತಿಳಿದುಕೊಳ್ಳಲಿಲ್ವ? ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ಸರಕಾರ ಇದೆ ಅಂತ ಹೇಳ್ತೀರಿ, ಆದರೆ ನಮ್ಮಂತಹ ಬಡವರ ಮನೆಯವರನ್ನು ಕೊಲ್ಲುತ್ತಲೇ ಹೋಗುತ್ತಿದ್ದಾರೆ. ನಿಮ್ಮಿಂದ ಏನು ನ್ಯಾಯ ಸಿಕ್ಕಿತು? ಎಂದು ತಿರುಗೇಟು ನೀಡಿದರು.
ಮೌನವಾದ ಡಿವಿ ಸರಕಾರದ ವೈಫಲ್ಯ ಇದೆ ಅನ್ನುವುದನ್ನು ಒಪ್ಪಿಕೊಂಡರು. ಜತೆಗೆ ಒಂದು ಲಕ್ಷ ರೂ. ಚೆಕ್ ಅನ್ನು ಪ್ರವೀಣ್ ಪತ್ನಿಗೆ ಹಸ್ತಾಂತರಿಸಿದರು. ಚೆಕ್ ಸ್ವೀಕರಿಸುವ ಮೊದಲು ಮಾತನಾಡಿದ ಪ್ರವೀಣ್ ಪತ್ನಿ, ಈ ಚೆಕ್ ನಿಂದ ಎಲ್ಲವೂ ಸರಿ ಆಗಲ್ಲ. ನೀವು ಹಾಗೂ ನಿಮ್ಮ ಸರಕಾರ ನನ್ನ ಪತಿಯ ಹತ್ಯೆಗೆ ನ್ಯಾಯ ಕೊಡಿಸಿದರೆ ಮಾತ್ರ ನಮಗೆ ಸಮಾಧಾನ ಎಂದು ತಿಳಿಸಿದರು.