ನ್ಯೂಸ್ ನಾಟೌಟ್: ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಮಾನವೀಯ ಮೌಲ್ಯಗಳ ಸಾಕಾರಮೂರ್ತಿಯಾಗಿದ್ದರು. ಕಷ್ಟ ಎಂದು ಬರುವ ಮನುಷ್ಯ ಆಗಲಿ ಅಥವಾ ಮೂಕ ಪ್ರಾಣಿಯೇ ಆಗಲಿ ಕರಗುವ ಮನಸ್ಸು ಪ್ರವೀಣ್ ಅವರದ್ದಾಗಿತ್ತು. ಮೂರು ವಾರಗಳ ಹಿಂದೆಯಷ್ಟೇ ತಡರಾತ್ರಿ ಮಳೆಗೆ ಒದ್ದೆಯಾಗಿ ರಸ್ತೆಯಲ್ಲಿ ಒದ್ದಾಡುತ್ತಿದ್ದ ಎರಡು ಅನಾಥ ನಾಯಿ ಮರಿಗಳನ್ನು ರಕ್ಷಿಸಿದ್ದರು. ಸ್ವತಃ ಈ ಬಗ್ಗೆ ಅವರೇ ಜುಲೈ೪ ರಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿಕೊಂಡಿದ್ದಾರೆ.
ಇದು ನಿನ್ನೆ ರಾತ್ರಿ (ಜುಲೈ೩ಕ್ಕೆ) ನಾನು ಸುಳ್ಯ ತಾಲೂಕಿನ ಬೆಳ್ಳಾರೆಯಿಂದ ಕೋಟೆಮುಂಡುಗಾರುಗೆ ಹೋಗುತ್ತಿದ್ದ ಸಂದರ್ಭ ಜೋರು ಮಳೆಗೆ ಕಳಂಜ ಕ್ರಾಸ್ ರಸ್ತೆ ಬದಿಯಲ್ಲಿ ಕಂಡು ಬಂದ ದೃಶ್ಯ. ಆ ಗಾಳಿ ಮಳೆಗೆ ನಾಯಿ ಮರಿಗಳು ಬೈಕಿನ ಬೆಳಕು ನೋಡಿ ಹತ್ತಿರ ಬಂದು ರಕ್ಷಣೆಗಾಗಿ ಅದರದ್ದೇ ಭಾಚೆಯಲ್ಲಿ ಕಾಡಿಬೇಡಿಕೊಂಡ ದೃಶ್ಯ ಎಂತಹ ಕಲ್ಲು ಹೃದಯವನ್ನೂ ಕರಗಿಸುವ ಹಾಗಿತ್ತು. ಈ ಮೂಕ ಪ್ರಾಣಿಯನ್ನು ಇಂತಹ ಜೋರು ಗಾಳಿ ಮಳೆಯ ಸಂದರ್ಭ ಜನರಹಿತವಾದ ರಸ್ತೆಯಲ್ಲಿ ಬಿಟ್ಟು ಹೋಗುವಂತಹ ದಯೆ, ಕನಿಕರ, ಇಲ್ಲದ ಹೀನಾಯ ಮನಃಸ್ಥಿತಿಯ ಆ ಕೊಳಕು ಹೊಲಸು ಜೀವಿಗಳು ಮುಂದೊಂದು ದಿನ ಖಂಡಿತವಾಗಿಯೂ ನರಕಯಾತನೆ ಅನುಭವಿಸುವುದರಲ್ಲಿ ಸಂಶಯವಿಲ್ಲ. ಒಂದು ವೇಳೆ ಯಾರಾದರೂ ಈ ರೀತಿಯಲ್ಲಿ ಬಿಡಬೇಕೆಂದಿದ್ದರೆ ಆ ಪುಟ್ಟ ಮರಿಗಳ ಜತೆಗೆ ಅದರ ತಾಯಿಯನ್ನೂ ಕೂಡ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿ, ಹೇಗಾದರೂ ಬದುಕಲು ಬಿಡಿ, ಸದ್ಯ ನನ್ನ ಕೈ ಸೇರಿದ ಆ ಪುಟ್ಟ ಮರಿಗಳು ಈಗ ನನ್ನ ಮಿತ್ರನ ಮನೆಯಲ್ಲಿ ಸುರಕ್ಷಿತವಾಗಿದೆ, ಬದುಕಿಸಿದ್ದೇವೆ ಎಂಬ ಜಂಬ, ಹೆಮ್ಮೆ ನಮ್ಮದು ಎಂದು ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು .ಆದರೆ ಇಂದು ಅವರನ್ನು ನಮಗೆ ಬದುಕಿಸಲು ಸಾಧ್ಯವಾಗಲಿಲ್ಲವಲ್ಲ ಎಂದು ಮಿತ್ರವರ್ಗದವರು ಅತೀವ ನೋವು ವ್ಯಕ್ತಪಡಿಸುತ್ತಿದ್ದಾರೆ.