ನ್ಯೂಸ್ ನಾಟೌಟ್: ಮಗುವಿನ ನಾಮಕರಣಕ್ಕೆ ಬಂದಿದ್ದ ಯುವಕ ಸ್ನೇಹಿತರೊಂದಿಗೆ ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆ ತೆರಳಿ ನೀರು ಪಾಲಾಗಿದ್ದಾನೆ. ಮೂರು ದಿನಗಳ ಸತತ ಹುಡುಕಾಟದ ಬಳಿಕ ಇದೀಗ ಅಶ್ವಿತ್ (೧೯) ಮೃತದೇಹ ಉಳ್ಳಾಲದ ಕೋಟೆಪುರ ಕೋಡಿಯ ಸಮುದ್ರ ತೀರದಲ್ಲಿ ಬುಧವಾರ ಪತ್ತೆಯಾಗಿದೆ.
ಸಜಿಪಪಡುವಿನ ತಲೆಮೊಗರು ಎಂಬಲ್ಲಿ ನಾಗೇಶ್ ಗಾಣಿಗ ಅವರ ಮನೆಯಲ್ಲಿ ಮಗುವಿನ ನಾಮಕರಣದ ಕಾರ್ಯಕ್ರಮಕ್ಕೆ ಅಶ್ವಿತ್ ಬಂದಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಸ್ನೇಹಿತರೊಂದಿಗೆ ಸಮೀಪದ ನೇತ್ರಾವತಿ ನದಿಗೆ ಈಜಲು ತೆರಳಿದ್ದರು. ಈ ವೇಳೆ ಅಶ್ವಿತ್ ಹಾಗೂ ಹರ್ಷ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋದರು. ಕೂಡಲೇ ಜತೆಯಲ್ಲಿದ್ದ ಯುವಕರು ಹರ್ಷನನ್ನು ಮೇಲಕ್ಕೆತ್ತಿದ್ದರು. ಆದರೆ ಅಶ್ವಿತ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.