ನ್ಯೂಸ್ ನಾಟೌಟ್: ತನ್ನಂತೆ ಹೋಲುವ ವ್ಯಕ್ತಿಯನ್ನು ಕೊಲೆ ಮಾಡಿ ಬಳಿಕ ತಾನು ಆರಾಮವಾಗಿ ಬದುಕುವುದಕ್ಕೆ ಪ್ಲಾನ್ ಮಾಡಿದ ಕಾರ್ಕಳದ ಖತರ್ನಾಕ್ ಹಂತಕನೊಬ್ಬ ಈಗ ಜೈಲುಪಾಲಾಗಿದ್ದಾನೆ.
ಹೌದು, ಬುಧವಾರ ಬೈಂದೂರಿನ ನಿರ್ಜನ ಪ್ರದೇಶದಲ್ಲಿ ಕಾರಿನೊಳಗೆ ಸುಟ್ಟ ಕರಕಲಾಗಿರುವ ದೇಹವೊಂದು ಪತ್ತೆಯಾಗಿತ್ತು. ಈ ದೇಹ ಯಾರದ್ದಾಗಿರಬಹುದೆಂದು ಪೊಲೀಸರು ಕೂಡ ತಲೆಯೊಳಗೆ ಹುಳ ಬಿಟ್ಟುಕೊಂಡಿದ್ದರು. ಕೊನೆಗೂ ಶತ ಪ್ರಯತ್ನ ನಡೆಸಿ ನಾಲ್ವರನ್ನು ಹಂತಕರನ್ನು ಅರೆಸ್ಟ್ ಕೂಡ ಮಾಡಿದರು. ಆಗ ತೆರೆದುಕೊಂಡಿದ್ದೇ ಕೊಲೆ ಸುತ್ತಲಿನ ರೋಚಕ ಸ್ಟೋರಿ..
ಆರೋಪಿಗಳಾದ ಸದಾನಂದ ಶೇರೆಗಾರ್ (52), ಶಿಲ್ಪಾ ಪೂಜಾರಿ (30), ಸತೀಶ ದೇವಾಡಿಗ (49) ಹಾಗೂ ನಿತಿನ್ ದೇವಾಡಿಗ (35) ನನ್ನು ಪೊಲೀಸರು ಬಂಧಿಸಿದ್ದರು. ಆರಂಭದಲ್ಲಿ ಇವರು ಸತ್ಯ ಹೇಳದಿದ್ದರೂ ನಂತರ ಠಾಣೆಗೆ ಕರೆದೊಯ್ಯಲಾಗಿ ಚೆನ್ನಾಗಿ ಬೆಂಡೆತ್ತಿದ ಬಳಿಕ ಒಂದೊಂದೇ ಸತ್ಯಗಳು ಬಹಿರಂಗವಾಗಿದೆ. ಆಗ ಬಯಲಾಗಿದ್ದೇ ಮಲೆಯಾಳಂ ಸಿನಿಮಾದ ಕ್ರೈಂ ಸಿನಿಮಾ ಮಾದರಿಯಲ್ಲೇ ಈ ಕೊಲೆಯೂ ನಡೆದಿತ್ತು ಅನ್ನುವ ವಿಚಾರ. ಸ್ವತಃ ಪೊಲೀಸರೇ ಈ ವಿಚಾರ ಕೇಳಿ ಶಾಕ್ ಆಗಿದ್ದಾರೆ.
ಆರೋಪಿ ಸದಾನಂದ ಕಾರ್ಕಳದಲ್ಲಿ ಸರ್ವೇ ಲೈಸನ್ಸ್ ಹೊಂದಿದವನಾಗಿದ್ದ. ೨೦೧೯ರಲ್ಲಿ ಎಂಎಮ್ ಬಿ ನಕ್ಷೆ ನಕಲಿ ಮಾಡಿದ್ದಕ್ಕಾಗಿ ಆತನ ವಿರುದ್ಧ ಕೇಸ್ ದಾಖಲಾಗಿತ್ತು. ಈತನ ವಿರುದ್ಧ ಒಂದು ವಂಚನೆ ಕೇಸ್ ದಾಖಲಾಗಿತ್ತು. ಇದೇ ಕೇಸ್ ನಲ್ಲಿ ಈತ ಜೈಲು ಪಾಲಾಗುವ ಆತಂಕದಲ್ಲಿದ್ದ. ಇದರಿಂದ ಹೇಗಾದರೂ ಪಾರಾಗಬೇಕು ಅಂದುಕೊಂಡಿದ್ದ ಸದಾನಂದನ ಹೆಚ್ಚು ಕ್ರೈಂ ಸಿನಿಮಾಗಳ ವೀಕ್ಷಣೆ ಮಾಡುತ್ತಿದ್ದ. ಇದರಲ್ಲಿ ಮಲೆಯಾಳಂ ಸಿನಿಮಾದ ಕ್ರೈಂ ದೃಶ್ಯ ಆತನಿಗೆ ಹೆಚ್ಚು ಇಷ್ಟವಾಗಿತ್ತು. ಆ ಸಿನಿಮಾದಲ್ಲಿ ತನ್ನಂತೆ ಹೋಲುವ ವ್ಯಕ್ತಿಯನ್ನು ಕೊಲೆ ಮಾಡಿ ಆರೋಪಿ ತಪ್ಪಿಸಿಕೊಳ್ಳುವ ದೃಶ್ಯ ಆತನಿಗೆ ಇಷ್ಟವಾಗಿತ್ತು. ಅದೇ ಮಾದರಿಯಲ್ಲಿ ಆನಂದ ದೇವಾಡಿಗ (60) ನನ್ನು ಕೊಂದು ತಾನೇ ಸತ್ತೆನೆಂದು ಸಮಾಜಕ್ಕೆ ತೋರಿಸಿ ನಂತರ ಸುಖವಾಗಿ ಬಾಳಬಹುದು ಎಂದು ಸದಾನಂದ ದುರಾಲೋಚನೆ ಮಾಡಿದ್ದ.
ಇದಕ್ಕಾಗಿ ಮೂವತ್ತು ವರ್ಷದ ಶಿಲ್ಪಾ ಎನ್ನುವ ಮಹಿಳೆಯನ್ನು ಬಳಸಿಕೊಂಡಿದ್ದ ಸದಾನಂದ ಮಾಸ್ಟರ್ ಪ್ಲಾನ್ ಮಾಡಿ ತನ್ನಂತೆ ಹೋಲುವ ಆನಂದನನ್ನು ಶಿಲ್ಪಾಳ ಕಡೆ ಸೆಳೆಯುವಂತೆ ಮಾಡುತ್ತಾನೆ. ಸುಂದರಿಯ ಮೋಹಕ ಮಾತಿಗೆ ಮರಳಾದ 60 ವರ್ಷದ ಅಜ್ಜ ಆನಂದನಿಗೆ ವಿರಹ ತಡೆದುಕೊಳ್ಳಲಾಗಲಿಲ್ಲ. ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬಳಸಲೇಬೇಕು ಎಂಬ ಚಟಕ್ಕೆ ಬಿದ್ದ. ಇದನ್ನು ಗಮನಿಸಿದ ಸದಾನಂದ ಮಿಕ ಹಳ್ಳಕ್ಕೆ ಬಿತ್ತು ಎಂದು ಭಾವಿಸಿ ಆನಂದನನ್ನು ಬಾರ್ ವೊಂದಕ್ಕೆ ಕರೆದುಕೊಂಡು ಹೋದ. ಶಿಲ್ಪಾ ನಿನಗೆ ಸಿಗುತ್ತಾಳೆ, ಆಕೆಯೊಂದಿಗೆ ನೀನು ಲೈಂಗಿಕ ಸಂಪರ್ಕ ಬಳಸಬಹುದು ಎನ್ನುತ್ತಾನೆ. ಟೆನ್ಷನ್ ನಿಂದ ಆನಂದ ಕಂಠಪೂರ್ತಿ ಕುಡಿಯುತ್ತಾನೆ. ಇದೇ ವೇಳೆ ಮಾತು ಮುಂದುವರಿಸಿದ ಸದಾನಂದ, ನೀನು ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾದರೆ ವಯಾಗ್ರ ಮಾತ್ರೆ ತೆಗೆದುಕೊಳ್ಳಬೇಕು ಎನ್ನುತ್ತಾನೆ. ಶಿಲ್ಪಾಳನ್ನು ಸೇರುವ ಆಸೆಯಿಂದ ಹಿಂದೆ ಮುಂದೆ ನೋಡದೆ ಆನಂದ ವಯಾಗ್ರ ಮಾತ್ರೆಯೆಂದು ನಿದ್ರೆ ಮಾತ್ರೆ ಸೇವಿಸುತ್ತಾನೆ. ಪ್ರಜ್ಞೆ ತಪ್ಪಿದ ಆನಂದನನ್ನು ಹೆನ್ ಬೇರು ನಿರ್ಜನ ಪ್ರದೇಶಕ್ಕೆ ಕರೆ ತಂದು ಸದಾನಂದನ ಹಾಗೂ ಹಂತಕರ ತಂಡ ಕಾರಿನಲ್ಲಿ ಕೂರಿಸಿ ಎರಡು ಲೀ. ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಾಕಿದ್ದಾರೆ. ನಂತರ ಆರೋಪಿಗಳು ಸದ್ದಿಲ್ಲದೆ ತಲೆಮರೆಸಿಕೊಂಡಿದ್ದರು.