ನ್ಯೂಸ್ ನಾಟೌಟ್ : ಜಿಲ್ಲಾಧಿಕಾರಿ ಕಚೇರಿ ಕೆಳಭಾಗದ ತಡೆಗೋಡೆ ಕುಸಿಯುವ ಭೀತಿ ಹಿನ್ನಲೆಯಲ್ಲಿ ಮಡಿಕೇರಿ ತಿಮ್ಮಯ್ಯ ವೃತ್ತದಲ್ಲಿರುವ ಮಂಗಳೂರು ರಸ್ತೆ ಸಂಚಾರ ಬಂದ್ ಆಗಿದೆ. ಬದಲಿ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಮೇಕೆರಿ ತಾಳತ್ತಮನೆ ಅಪ್ಪಂಗಳ ಮಾರ್ಗವಾಗಿ ಬಳಸುವಂತೆ ವಾಹನ ಸವಾರರಿಗೆ ಸೂಚಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಸ್ತೆ ಬಂದ್ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ತಿಮ್ಮಯ್ಯ ವೃತ್ತದಲ್ಲಿ ಸಂಚಾರಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಮಂಗಳೂರು ರಸ್ತೆ ಬಂದ್ ಮಾಡಿದ್ದಾರೆ. ತಡೆಗೋಡೆಯಲ್ಲಿ ಉಬ್ಬುಗಳು ಕಂಡು ಬಂದಿವೆ. ಯಾವ ಸಮಯದಲ್ಲಿಯೂ ತಡೆಗೋಡೆ ಕುಸಿಯಬಹುದು ಎನ್ನಲಾಗಿದೆ. ಗೋಡೆ ಕುಸಿತವಾದಲ್ಲಿ ಭಾರಿ ಅನಾಹುತ ಸಾಧ್ಯತೆ ಇದೆ. ಲಕ್ಷಾಂತರ ರೂಪಾಯಿ ಖರ್ಚುಮಾಡಿ ತಡೆಗೋಡೆ ನಿರ್ಮಿಸಲಾಗಿತ್ತು.