ಲಕ್ನೋ: ಬಿಜೆಪಿ ಎಂಎಲ್ಎಗೆ ಮಹಿಳೆಯರ ಗುಂಪು ಮಣ್ಣಿನ ಸ್ನಾನ ಮಾಡಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಇದಕ್ಕೆ ಅಸಲಿ ಕಾರಣ ತಿಳಿದು ನೆಟ್ಟಿಗರು ಶಾಕ್ ಆಗಿದ್ದಾರೆ.
ಉತ್ತರ ಪ್ರದೇಶದ ಮಹಾರಾಜ್ ಗಂಜ್ ನಲ್ಲಿ ಮಹಿಳೆಯರ ಗುಂಪೊಂದು ಬಿಜೆಪಿ ಶಾಸಕ ಜಯಮಂಗಲ್ ಕನೋಜಿಯಾ ಅವರಿಗೆ ಮಣ್ಣನ್ನು ಕಲಸಿದ ನೀರಿನಿಂದ ಸ್ನಾನ ಮಾಡಿಸಿದ ವೀಡಿಯೋ ವೈರಲ್ ಆಗಿದೆ. ವೀಡಿಯೋ ನೋಡಿದ ನೆಟ್ಟಿಗರು ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಕೊನೆಗೆ ಇದು ಒಂದು ರೀತಿಯ ಆಚರಣೆ ಎಂದು ತಿಳಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಬಿಸಿಲಿನ ತಾಪದ ನಡುವೆಯೂ ಮಳೆ ದೇವರನ್ನು ಒಲಿಸಿಕೊಳ್ಳುವ ಆಚರಣೆಯ ಭಾಗವಾಗಿ ಮಹಿಳೆಯರು ಬಿಜೆಪಿ ಶಾಸಕನಿಗೆ ಮಡೆ ಸ್ನಾನ(ಮಣ್ಣಿನ ಸ್ನಾನ) ಮಾಡಿಸಿದ್ದಾರೆ. ನಗರದ ಮುಖ್ಯಸ್ಥನಿಗೆ ಮಣ್ಣಿನ ಸ್ನಾನ ಮಾಡಿಸಿದರೆ ಇಂದ್ರ ದೇವನಿಗೆ ಸಂತೋಷವನ್ನು ನೀಡುತ್ತದೆ ಎಂಬುದು ನಂಬಿಕೆ. ಇದರಿಂದ ಮಳೆಯಾಗಿ ಭತ್ತದ ಇಳುವರಿ ಚೆನ್ನಾಗಿ ಆಗುತ್ತೆ ಎಂದು ಮಹಿಳೆಯರಲ್ಲಿ ಒಬ್ಬರಾದ ಮುನ್ನಿ ದೇವಿ ತಿಳಿಸಿದ್ದಾರೆ. ಮಹಾರಾಜ್ ಗಂಜ್ ನ ಪಿಪಾರ್ಡೆಯುರಾ ಪ್ರದೇಶದ ಮಹಿಳೆಯರು ಶಾಸಕ ಜಯಮಂಗಲ್ ಕನೋಜಿಯಾ ಮತ್ತು ನಗರಪಾಲಿಕೆ ಅಧ್ಯಕ್ಷ ಕೃಷ್ಣ ಗೋಪಾಲ್ ಜೈಸ್ವಾಲ್ ಗೆ ಹಾಡುಗಳನ್ನು ಆಡುತ್ತ ಮಡೆ ಸ್ನಾನ ಮಾಡಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಅವರಿಬ್ಬರು ಸಂತೋಷದಿಂದ ಭಾಗಿಯಾಗಿದ್ದಾರೆ.