ನ್ಯೂಸ್ ನಾಟೌಟ್: ಕೊಡಗು ಸಂಪಾಜೆ, ದಕ್ಷಿಣ ಕನ್ನಡ ಸಂಪಾಜೆ, ಚೆಂಬು, ಕಲ್ಲುಗುಂಡಿ ಗಡಿ ಭಾಗ ಸೇರಿದಂತೆ ಸುಳ್ಯ ತಾಲೂಕಿನ ವಿವಿಧ ಕಡೆ ಮತ್ತೊಮ್ಮೆ ಶುಕ್ರವಾರ ತಡರಾತ್ರಿ 1.15 ಕ್ಕೆ ಭಾರಿ ಶಬ್ಧದೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ಆಗಷ್ಟೇ ಗಾಢ ನಿದ್ರೆಯಲ್ಲಿದ್ದ ಜನರನ್ನು ಭೂಕಂಪ ಏಕಾಏಕಿ ಬಡಿದೆಬ್ಬಿಸಿದೆ. ಪ್ರಾಣಭಯದಿಂದ ಜನರು ಹೆದರಿ ಮನೆಯಿಂದ ಹೊರಕ್ಕೆ ಓಡಿ ಬಂದಿದ್ದಾರೆ. ಮೊದಲಿಗೆ ಭಾರಿ ಶಬ್ಧ ಕೇಳಿ ಬಂತು, ನಂತರ ಒಮ್ಮೆಗೆ ಭೂಮಿ ನಡುಗಿತು. ಸುಮಾರು 2 ಸೆಕೆಂಡ್ ಕಾಲ ನೆಲ ನಡುಗಿದೆ.
ಕಳೆದ ಒಂದು ವಾರದೊಳಗೆ ಕೊಡಗು ಹಾಗೂ ಸುಳ್ಯ ತಾಲೂಕಿನ ವಿವಿಧ ಕಡೆ ೪ನೇ ಬಾರಿ ಭೂಮಿ ಕಂಪಿಸಿದ ಅನುಭವ ಆಗುತ್ತಿದೆ. ಸದ್ಯ ಜನರು ಭಾರಿ ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ತುರ್ತಾಗಿ ಕೊಡಗು ಹಾಗೂ ದಕ್ಷಿಣ ಕನ್ನಡದ ವಿವಿಧ ಭಾಗಗಳನ್ನು ಪರಿಶೀಲಿಸಿ ಮುಂದಾಗುವ ಭಾರಿ ಅನಾಹುತಗಳನ್ನು ತಪ್ಪಿಸಬೇಕೆನ್ನುವುದು ಜನರ ಒತ್ತಾಯವಾಗಿದೆ.