ನ್ಯೂಸ್ ನಾಟೌಟ್: ವರ್ಷಗಳ ಹಿಂದೆಯಷ್ಟೇ ಕಂಬಳದಲ್ಲಿ ಭಯಂಕರ ಓಡಿದ್ದಾರೆ ವಿಶ್ವವಿಖ್ಯಾತ ಓಟಗಾರ ಉಸೇನ್ ಬೋಲ್ಟ್ ದಾಖಲೆಯನ್ನು ಮುರಿದಿದ್ದಾರೆ ಎಂದು ಸುದ್ದಿಯಾಗಿದ್ದ ಶ್ರೀನಿವಾಸಗೌಡನ ವಿರುದ್ಧ ಇದೀಗ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ವಂಚನೆಯ ಹಿನ್ನೆಲೆಯ ಕ್ರಿಮಿನಲ್ ಕೇಸ್ ದಾಖಲಾಗಿದೆ. ಇದೇ ವೇಳೆ ಇನ್ನಿಬ್ಬರು ಜತೆಗಾರರ ವಿರುದ್ಧವೂ ದೂರು ದಾಖಲಾಗಿದೆ. ಕಂಬಳ ಸಮಿತಿ ಸದಸ್ಯ ಲೋಕೇಶ್ ಶೆಟ್ಟಿ ದೂರು ನೀಡಿದ್ದು ಶ್ರೀನಿವಾಸಗೌಡ, ಗುಣಪಾಲ ಕಡಂಬ, ರತ್ನಾಕರ ಹೆಸರನ್ನು ಉಲ್ಲೇಖಿಸಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಸರಕಾರ ಮತ್ತು ಸಾರ್ವಜನಿಕರಿಗೆ ಇವರೆಲ್ಲರೂ ವಂಚಿಸಿದ್ದಾರೆ. ಖ್ಯಾತ ಓಟಗಾರ ಒಲಿಂಪಿಯನ್ ಉಸೇನ್ ಬೋಲ್ಟ್ ದಾಖಲೆ ಮುರಿದ ಹೆಸರಲ್ಲಿ ಹಣ ಸಂಗ್ರಹಿಸಿದ್ದಾರೆ. ಅಧಿಕೃತ ಮಾನ್ಯತೆ ಪಡೆಯದ ಸ್ಕೈವೀವ್ ಸಂಸ್ಥೆಯಿಂದ ಸುಳ್ಳು ತೀರ್ಪು ನೀಡಲಾಗಿದೆ. ಲೇಸರ್ ಭೀಮ್ ಮೂಲಕ ಕಂಬಳದ ಫಲಿತಾಂಶ ಘೋಷಣೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.. 100 ಮೀಟರ್ ದೂರವನ್ನು ಶ್ರೀನಿವಾಸ ಗೌಡ 9.55 ಸೆಕೆಂಡ್ ನಲ್ಲಿ ಕ್ರಮಿಸಿದ್ದರು. ಉಸೇನ್ ಬೋಲ್ಟ್ 9.58 ಸೆಕೆಂಡ್ ನಲ್ಲಿ ಕ್ರಮಿಸಿದ ದಾಖಲೆ ಹಿಂದಿಕ್ಕಿದ್ದಾರೆ ಎಂದು ಸುದ್ದಿಯಾಗಿತ್ತು. ಇವರಿಗೆ ರಾಜ್ಯ ಸರ್ಕಾರ ಸೇರಿದಂತೆ ಹಲವು ಸಂಸ್ಥೆಗಳಿಂದ ಶ್ರೀನಿವಾಸಗೌಡನಿಗೆ ನೆರವು ಹರಿದುಬಂದಿತ್ತು. ಸದ್ಯ ಪೊಲೀಸ್ ತನಿಖೆ ನಡೆಸಿ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಲೋಕೇಶ್ ಶೆಟ್ಟಿ ಆಗ್ರಹಿಸಿದ್ದಾರೆ.