ನ್ಯೂಸ್ ನಾಟೌಟ್: ಕೊಡಗು ಜಿಲ್ಲೆಯಾದ್ಯಂತ ಭಾರಿ ಗಾಳಿ ಮಳೆ ಸುರಿಯುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ಮತ್ತೆ ಗುಡ್ಡ ಕುಸಿತವಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ತಡರಾತ್ರಿ ಜೋಡುಪಾಲದ ಬಳಿ ರಾಷ್ಟ್ರೀಯ ಹೆದ್ದಾರಿ 275 ಕ್ಕೆ ಗುಡ್ಡ ಕುಸಿತವಾಗಿದೆ. ಇದರಿಂದಾಗಿ ಒಂದು ಗಂಟೆಗಳ ಕಾಲ ಸಾಲು ಗಟ್ಟಿ ವಾಹನಗಳು ನಿಂತವು. ಉಳಿದಂತೆ ಸಂಪಾಜೆ, ಚೆಂಬು, ಗೂನಡ್ಕ, ಅರಂತೋಡು ಹಾಗೂ ಸುಳ್ಯ ತಾಲೂಕಿನ ವಿವಿಧ ಕಡೆ ಬಿರುಸಾಗಿ ಮಳೆ ಸುರಿಯುತ್ತಿದೆ. ಗೂನಡ್ಕದಲ್ಲಿ ಕೆಲವು ಮನೆಯ ಮೇಲೆ ಗುಡ್ಡ ಕುಸಿದಿದೆ. ರಸ್ತೆಗಳು ನೀರಿನಿಂದ ಜಲಾವೃತವಾಗಿದೆ. ಕೊಯನಾಡಿನಲ್ಲಿ ಪಯಸ್ವಿನಿ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮ ಕೊಯನಾಡು ಶಾಲೆಯ ಬಳಿ ಇರುವ ಮನೆ ಸಂಪೂರ್ಣ ನೀರಿನಿಂದ ಆವೃತ್ತವಾಗಿದೆ.
ಬ್ರಹ್ಮಗಿರಿ ತಪ್ಪಲಲ್ಲಿ ಭಾರಿ ಮಳೆಯಾಗುತ್ತಿದೆ. ಮಳೆ ಹೆಚ್ಚಾದ ಹಿನ್ನಲೆ ಅಪಾದ ಮಟ್ಟ ಮೀರಿ ಕಾವೇರಿ ನದಿ ಹರಿಯುತ್ತಿದೆ. ಭಾಗಮಂಡಲ ನಾಪೋಕ್ಲು ರಸ್ತೆ ಸಂಪೂರ್ಣ ಬಂದ್ ಆಗಿದೆ. ರಸ್ತೆಯ ಮೇಲೆ ಸುಮಾರು 2 ಅಡಿ ನೀರು ನಿಂತಿದೆ. ಸಾರ್ವಜನಿಕರಿಗೆ ಪರ್ಯಾಯವಾಗಿ ಜಿಲ್ಲಾಡಳಿತ ಬೋಟ್ ವ್ಯವಸ್ಥೆ ಕಲ್ಪಿಸಿದೆ.