ನ್ಯೂಸ್ ನಾಟೌಟ್: ಒಂದು ಕಡೆ ಜೋರಾಗಿ ಸುರಿಯುತ್ತಿರುವ ಮಳೆ ಹಾಗೂ ಇಂದು (ಭಾನುವಾರ) ಬೆಳ್ಳಂ ಬೆಳಗ್ಗೆ ಸಂಭವಿಸಿದ ಭೂಕಂಪದಿಂದ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿ ಭಾಗದ ಜನರು ಭಯಭೀತರಾಗಿದ್ದಾರೆ. ರಿಕ್ಟರ್ ಮಾಪಕದಲ್ಲಿ 1.8 ರಷ್ಟು ತೀವ್ರತೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ಪ್ರತಿ ಸಲ ಚೆಂಬು ಗ್ರಾಮ ಕಂಪನಕ್ಕೆ ಕೇಂದ್ರವಾಗುತ್ತಿತ್ತು. ಆದರೆ ಈ ಸಲ ಭೂಕಂಪನದ ಕೇಂದ್ರ ಬಿಂದು ಸುಳ್ಯ ತಾಲೂಕಿನ ಅರಂತೋಡು ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಒಟ್ಟು 10 ಕಿ.ಮೀ ವ್ಯಾಪ್ತಿಯಲ್ಲಿ ಕಂಪನದ ಅನುಭವ ಆಗಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಕಳೆದೊಂದು ತಿಂಗಳಿನಿಂದ ಎಂಟು ಸಲ ಭೂಕಂಪ ಆಗಿದೆ. ಅಲ್ಲದೆ ರಾತ್ರಿ ಹೊತ್ತಿನಲ್ಲಿ ಚೆಂಬು ಗ್ರಾಮದಲ್ಲಿ ಭೂಮಿಯೊಳಗಿನಿಂದ ಅಗೋಚರ ಶಬ್ಧಗಳಾಗುತ್ತಿದ್ದು ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.