ನ್ಯೂಸ್ ನಾಟೌಟ್: ತಾವರೆ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಮನೆಯಂಗಳದಲ್ಲೇ ನೂರಾರು ಬಗೆಯ ಬಣ್ಣ..ಬಣ್ಣದ ತಾವರೆ ಇದ್ದರೆ ಎಷ್ಟು ಚೆನ್ನಾಗಿರುತ್ತಲ್ವಾ? ಅಂತಹುದೇ ಒಂದು ತಾವರೆ ಪ್ಲಾಂಟ್ ಅನ್ನು ನಿರ್ಮಿಸಿ ಗೃಹಿಣಿಯೊಬ್ಬರು ಜನರ ಗಮನವನ್ನೆಲ್ಲ ಈಗ ಪುತ್ತೂರಿನ ಕಡೆ ಸೆಳೆದಿದ್ದಾರೆ.
ಹೌದು, ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಪುತ್ತೂರು ಕಂಬಳಿ ಬೆಟ್ಟುವಿನ ಉರಿಮಜಲಿನ ಗೃಹಿಣಿ ಸುಮನ ಕೆ. ಅನ್ನುವವರು ಕಳೆದ ಹತ್ತು ವರ್ಷಗಳಿಂದ ತಾವರೆ ಕೃಷಿಯನ್ನು ಮಾಡಿಕೊಂಡು ಬಂದಿದ್ದಾರೆ. ಕಮಲ ಅನ್ನುವುದು ಲಕ್ಷ್ಮೀ ಸ್ವರೂಪ ಅನ್ನುವ ಕಾರಣಕ್ಕೆ ಬೆಳೆಸುತ್ತಿರುವ ಸುಮನ ಅವರು ಆರಂಭದಲ್ಲಿ ಹವ್ಯಾಸವಾಗಿ ಬೆಳೆಸಿದರು. ಇದೀಗ ದೊಡ್ಡ ಮಟ್ಟದಲ್ಲಿ ತಾವರೆಯನ್ನು ಮಾರಾಟವೂ ಮಾಡಿ ಯಶಸ್ವಿ ಉದ್ಯಮಿಯೂ ಆಗಿದ್ದಾರೆ. ಕೆಲವು ಗೃಹಿಣಿಯರು ಮದುವೆಯಾದ ಮೇಲೆ ಜೀವನದಲ್ಲಿ ಏನೂ ಸಾಧನೆ ಮಾಡಲು ಆಗುವುದಿಲ್ಲ ಎಂದು ತಮಗೆ ತಾವೇ ಶಪಿಸುತ್ತಾ ಕುಳಿತುಕೊಂಡಿರುತ್ತಾರೆ. ಅಂತಹ ಎಷ್ಟೋ ಹೆಣ್ಣು ಮಕ್ಕಳಿಗೆ ಮನಸ್ಸಿದ್ದರೆ ಮಾರ್ಗ ಇದ್ದೇ ಇದೆ ಅನ್ನುವುದನ್ನು ಸುಮನ ತೋರಿಸಿಕೊಟ್ಟಿದ್ದಾರೆ.
13 ಜಾತಿಯ ತಾವರೆ ಇದೆ. ಇನ್ನು 45 ಜಾತಿಯ ವಾಟರ್ ಲಿಲ್ಲಿ ಇದೆ. ಇವರು ತಮ್ಮ ಮನೆಯ ಅಂಗಳದಲ್ಲಿ ಟಬ್, ಪಾಟ್ ಹಾಗೂ ಸಣ್ಣ ಸಣ್ಣ ಡ್ರಮ್ ಗಳ ಬಳಕೆ ಮಾಡಿಕೊಂಡು ತಾವರೆಗಳನ್ನು ನೆಟ್ಟು ಬೆಳೆಸಿದ್ದಾರೆ. ಉತ್ತರ ಭಾರತದಿಂದ ಖರೀದಿಸಿ ಪುತ್ತೂರಿನಲ್ಲಿ ನೆಟ್ಟು ಬೆಳೆಸಿರುವುದು ವಿಶೇಷ. ಟ್ರಾಪಿಕಲ್ ಹಾಗೂ ಹಾರ್ಡಿ ಅನ್ನುವ 2 ವಿಧದ ತಾವರೆ ಇರುತ್ತದೆ. ಇದರಲ್ಲಿ ಸುಮನ ಅವರು ಟ್ರಾಪಿಕಲ್ ವಿಧದ ತಾವರೆಗಳನ್ನು ಬೆಳೆಯುತ್ತಾರೆ. ಏಕೆಂದರೆ ಈ ತಾವರೆಗಳು ದಕ್ಷಿಣ ಕನ್ನಡದ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುತ್ತದೆ. ಅಲ್ಲದೆ ಪ್ರತಿ ದಿನವೂ ಈ ತಾವರೆ ಅರಳಿ ನಿಲ್ಲುತ್ತದೆ. ಇನ್ನೂ ಹಾರ್ಡಿ ಅನ್ನುವ ತಾವರೆಗಳು ಹೆಚ್ಚು ಶೀತ ಪ್ರದೇಶಕ್ಕೆ ಹೊಂದಿಕೊಂಡಿರುತ್ತದೆ. ಹೀಗಾಗಿ ಕರಾವಳಿಯ ವಾತಾವರಣದಲ್ಲಿ ಅದನ್ನು ಬೆಳೆಯುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಾರೆ ಸುಮನ. ಈ ಕೃಷಿಗೆ ಪತಿ ನಾರಾಯಣ್ ರಾವ್, ಮಗ ಶಿವಗುರು ದತ್ತ, ಸೊಸೆ ಸ್ವಾತಿ ರಾಘಾಡಿ, ಮಗಳು ಅನಘದೇವಿ ಪ್ರೋತ್ಸಾಹವೇ ಕಾರಣ ಎಂದು ಹೇಳಲು ಮರೆಯಲಿಲ್ಲ ಸುಮನ.
ತಾವರೆ ಗಿಡಗಳು ಖರೀದಿಸಲೂ ಅವಕಾಶವಿದೆ. 300 ರೂ.ವಿನಿಂದ 8,000 ರೂ. ವರೆಗಿನ ತಾವರೆಗಳು ಖರೀದಿಗೆ ಲಭ್ಯವಿದೆ. ಆಸಕ್ತರು 94801 02703 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.