ನ್ಯೂಸ್ ನಾಟೌಟ್: ಹಲವು ಸಲ ಭೂಕಂಪಕ್ಕೆ ಕೇಂದ್ರ ಬಿಂದುವಾಗಿರುವ ಚೆಂಬು ಗ್ರಾಮದಲ್ಲಿ ಮತ್ತೊಮ್ಮೆ ಭಾರಿ ಶಬ್ಧದೊಂದಿಗೆ ಶುಕ್ರವಾರ (ಬೆಳಗ್ಗೆ ೧೦ ಗಂಟೆ೧೦ ನಿಮಿಷಕ್ಕೆ)ನೆಲ ನಡುಗಿದ ಅನುಭವ ಆಗಿದೆ.
ಚೆಂಬು ಗ್ರಾಮದ ಕೂಡಡ್ಕ ಎಂಬಲ್ಲಿ ಕಂಪನದ ತೀವ್ರತೆ ಕಡಿಮೆ ಇತ್ತು. ಆದರೆ ಕೂಡಡ್ಕದಿಂದ ಐದಾರು ಕಿ.ಮೀ ಆಚೆಗೆ ಹೆಚ್ಚಿನ ಪ್ರಮಾಣದಲ್ಲಿ ಕಂಪನ ಉಂಟಾಗಿದೆ ಎನ್ನಲಾಗಿದೆ. ಈ ಕಂಪನದ ಪರಿಣಾಮವಾಗಿ ಗೂನಡ್ಕ, ಅರಂತೋಡು ಹಾಗೂ ಪೆರಾಜೆಯ ಕೆಲವು ಭಾಗಗಳಲ್ಲೂ ಕಂಪನದ ಅನುಭವ ಆಗಿದೆ ಎಂದು ತಿಳಿದು ಬಂದಿದೆ. ಕಳೆದ ಒಂದು ತಿಂಗಳಿನಿಂದ ಈಚಿಗೆ ೧೦ಕ್ಕೂ ಹೆಚ್ಚು ಸಲ ಕಂಪನದ ಅನುಭವ ಆಗಿದ್ದು ಜನರು ಪ್ರತಿ ದಿನ ಭಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ಜನರು ಗುಡ್ಡ ಪ್ರದೇಶದಲ್ಲಿ ವಾಸವಿರುವುದರಿಂದ ಜನರಿಗೆ ಭೂಕಂಪನದಿಂದಾಗಿ ಗುಡ್ಡ ಜರಿಯಬಹುದು ಎನ್ನುವ ಭಯದ ವಾತಾವರಣ ನಿರ್ಮಾಣವಾಗಿದೆ.