ನ್ಯೂಸ್ ನಾಟೌಟ್ : ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಯ ಬೆನ್ನಲ್ಲೇ ಬಿಜೆಪಿ ನಾಯಕರ ವಿರುದ್ಧವೇ ಹಿಂದೂ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಕಾರ್ಯಕರ್ತರು ಬಿಜೆಪಿ ಸ್ವಾರ್ಥ ಸಾಧನೆಗಾಗಿ ಬಡವರ ಮನೆಯ ಮಕ್ಕಳನ್ನು ಉಪಯೋಗಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಕಾರ್ಯಕರ್ತರ ಆಕ್ರೋಶಕ್ಕೆ ಹದರಿಯೇ ಕೆಲವು ನಾಯಕರು ಜಾಲತಾಣದಲ್ಲಿ ಯಾವುದೇ ಸಂತಾಪ ಸೂಚಿಸದೆ ಮೌನಕ್ಕೆ ಶರಣಾಗಿದ್ದಾರೆ ಎಂದು ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.
ಪಕ್ಷಕ್ಕಾಗಿ ನಾವು ಹಗಲು ರಾತ್ರಿ ದುಡಿಯುತ್ತೇವೆ. ಈ ಥರ ಕೊಲೆ ಆದಾಗ ಮನೆಯಲ್ಲಿ ಕರೆಂಟ್ ಇರಬಾರದಪ್ಪ. ಇವತ್ತು ಮನೆಯಲ್ಲಿ ಅಪ್ಪ –ಅಮ್ಮ ಟಿವಿ ನೋಡದಿರಲಿ ಅಂತ ಪ್ರಾರ್ಥಿಸುತ್ತೇವೆ. ಏಕೆಂದರೆ ಎಲ್ಲಿ ಮುಂದೆ ಪಕ್ಷದ ಕೆಲಸಕ್ಕೆ ಹೋಗುವುದಕ್ಕೂ ಬಿಡುವುದಿಲ್ಲ ಎಂದು ಹೆದರಿಕೆಯಲ್ಲೇ ಇರ್ತೇವೆ. ಇಷ್ಟೆಲ್ಲ ನಿಷ್ಠೆ ತೋರುವ ಕಾರ್ಯಕರ್ತರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ ಎಂದು ಶಶಿ ಅಲ್ಲೂರ್ ಅನ್ನುವ ಕಾರ್ಯಕರ್ತ ನೋವನ್ನು ತೋಡಿಕೊಂಡಿದ್ದಾರೆ. ಇವರೊಬ್ಬರೇ ಅಲ್ಲ ಇಂತಹ ಸಾವಿರಾರು ಕಾರ್ಯಕರ್ತರು ಜಾಲತಾಣದಲ್ಲಿ ನೋವನ್ನು ವ್ಯಕ್ತಪಡಿಸಿದ್ದಾರೆ.
ಪ್ರವೀಣ್ ಹತ್ಯೆಯೊಂದಿಗೆ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಬುಗಿಲೆದ್ದಿದೆ. ಸ್ವಾರ್ಥ ಸಾಧನೆಗಾಗಿ ಬಿಜೆಪಿ ನಾಯಕರು ಉಪಯೋಗಿಸುತ್ತಿದ್ದಾರೆ. ಕಾರ್ಯಕರ್ತರ ಆಕ್ರೋಶಕ್ಕೆ ಹೆದರಿ ತಮ್ಮ ಫೇಸ್ ಬುಕ್ ಪೇಜ್ ಗಳಲ್ಲಿ ಆತ್ಮಶಾಂತಿ ಕೋರುವುದಕ್ಕೂ ಕೆಲವು ನಾಯಕರು ಹಿಂಜರಿದಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರವೀಣ್ ಹತ್ಯೆಯಾಗಿ ಬರೋಬ್ಬರಿ ೧೨ ಗಂಟೆ ನಂತರ ಎಚ್ಚೆತ್ತ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಶಾಂತಿ ಕೋರಿದ್ದಾರೆ. ಕೆಲವು ನಾಯಕರು ಪೋಸ್ಟ್ ಹಾಕಿದ್ದಾರೆ. ಅಂತಹವರ ವಾಲ್ ಗೆ ಬಂದ ಕಾರ್ಯಕರ್ತರು ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರ ಆಕ್ರೋಶಕ್ಕೆ ಹೆದರಿಯೇ ಇಷ್ಟರವರೆಗೆ ಬಿಜೆಪಿಯ ಯಾವೊಬ್ಬ ನಾಯಕರು ಕೂಡ ಘಟನೆ ನಡೆದ ಸ್ಥಳದತ್ತ ಸುಳಿದಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.