ನ್ಯೂಸ್ ನಾಟೌಟ್: ಬಿಜೆಪಿ ಯುವ ಮೋರ್ಚಾ ನಾಯಕನ ಭೀಕರ ಹತ್ಯೆ ಪ್ರಕರಣ ಕರಾವಳಿ ಜನತೆಯನ್ನು ಬೆಚ್ಚಿ ಬೀಳಿಸಿದೆ.
ಬೆಳ್ಳಾರೆಯಲ್ಲಿ ಈಗ ದ್ವೇಷಕ್ಕೆ ದ್ವೇಷ ರಕ್ತಕ್ಕೆ ರಕ್ತ ಎನ್ನುವ ಕರಾಳ ಅಧ್ಯಾಯ ಆರಂಭವಾಗಿದೆಯೇ? ಅನ್ನುವಂತಹ ಅನುಮಾನ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ. ಸಾರ್ವಜನಿಕರ ಸಮ್ಮುಖದಲ್ಲೇ ಈ ಕೊಲೆ ನಡೆದಿರುವುದರಿಂದ ಜನ ಭಯಭೀತರಾಗಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ನಡೆದೀತು ಅನ್ನುವುದನ್ನು ಕೆಲವರಿಗೆ ಊಹಿಸಿಕೊಳ್ಳುವುದಕ್ಕೂ ಕಷ್ಟವಾಗಿದೆ. ಏಕೆಂದರೆ ೩೨ ವರ್ಷದ ಪ್ರವೀಣ್ ನೆಟ್ಟಾರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಹಿಂದೂ ಸಂಘಟನೆಗಳಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದರು. ಮಂಗಳವಾರ ದುಷ್ಕರ್ಮಿಗಳ ಮಚ್ಚಿನೇಟಿನ ಅಟ್ಟಹಾಸಕ್ಕೆ ಬಲಿಯಾಗಿ ಇಹಲೋಕ ತ್ಯಜಿಸಿದ ಬೆನ್ನಲ್ಲೇ ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ. ಮೊನ್ನೆ ಮೊನ್ನೆಯಷ್ಟೇ ನಡೆದ ಮಸೂದ್ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿರಬಹುದೇ? ಅನ್ನುವ ಗುಸುಗುಸು ಕೇಳಿ ಬರುತ್ತಿದೆ.
ಮಂಗಳವಾರ (ಜು.೨೬) ರಾತ್ರಿ ಪ್ರವೀಣ್ ನೆಟ್ಟಾರು ಎಂದಿನಂತೆ ತನ್ನ ಅಕ್ಷಯ ಚಿಕನ್ ಸೆಂಟರ್ ನಲ್ಲಿ ಕುಳಿತುಕೊಂಡಿದ್ದರು. ಈ ವೇಳೆ ಇವರ ಅಂಗಡಿಯ ಎದುರು ಕೇರಳ ರಿಜಿಸ್ಟ್ರೇಶನ್ ನಂಬರ್ ಹೊಂದಿದ್ದ ದ್ವಿಚಕ್ರ ವಾಹನದಿಂದ ಇಬ್ಬರು ದುಷ್ಕರ್ಮಿಗಳು ಮಚ್ಚು ಹಿಡಿದು ಕೆಳಕ್ಕೆ ಇಳಿದರು. ಇವರನ್ನು ನೋಡುತ್ತಿದ್ದಂತೆ ಪ್ರವೀಣ್ ತನ್ನ ಅಂಗಡಿಯಿಂದ ಪಕ್ಕದ ಅಂಗಡಿಯತ್ತ ಓಡಿದರು. ಈ ವೇಳೆ ಹಿಂದಿನಿಂದ ಬಂದ ದುಷ್ಕರ್ಮಿಗಳು ಪ್ರವೀಣ್ ತಲೆಗೆ ಮಚ್ಚಿನಿಂದ ಕಡಿದು ಮಿಂಚಿನ ವೇಗದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ತೀವ್ರ ಏಟಿನಿಂದ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದ ಪ್ರವೀಣ್ ಅವರನ್ನು ತಕ್ಷಣ ಸ್ಥಳೀಯರು ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಈ ಸಂದರ್ಭದಲ್ಲಿ ಅವರು ದಾರಿ ಮದ್ಯೆ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
ಪ್ರವೀಣ್ ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದರು. ಇದೀಗ ಪತಿಯನ್ನು ಕಳೆದುಕೊಂಡ ಪತ್ನಿ, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಕೂಡಲೇ ದುಷ್ಕರ್ಮಿಗಳನ್ನು ಬಂಧಿಸುವಂತೆ ಕುಟುಂಬಸ್ಥರು, ಬಂದು ಬಳಗದವರು ಆಗ್ರಹಿಸಿದ್ದಾರೆ.
ಕಳಂಜದಲ್ಲಿ ನಡೆದಿದ್ದ ಮಸೂದ್ ಹತ್ಯೆಯ ಹಿನ್ನೆಲೆಯಲ್ಲಿ ಪ್ರತೀಕಾರವಾಗಿ ಕೊಲೆ ನಡೆದಿದೆ ಅನ್ನುವ ವಿಚಾರ ಹರಡಿದೆ. ಹೀಗಾಗಿ ಬೆಳ್ಳಾರೆ ಈಗ ಉದ್ವಿಗ್ನಗೊಂಡಿದೆ. ಈ ಹಿನ್ನೆಲೆಯಲ್ಲಿ ಬೆಳ್ಳಾರೆ ವ್ಯಾಪ್ತಿಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಮಾತ್ರವಲ್ಲ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಪಡೆಗಳನ್ನೂ ನಿಯೋಜಿಸಲಾಗಿದೆ.
ಈ ಘಟನೆ ಬೆನ್ನಲ್ಲೇ ಪೊಲೀಸರು ಪುತ್ತೂರು ಪೇಟೆಯಲ್ಲಿನ ಅಂಗಡಿ, ಹೋಟೆಲ್, ಮಳಿಗೆಗಳನ್ನು ಅವಧಿಗೆ ಮೊದಲೇ ಬಂದ್ ಮಾಡಿಸಿದರು. ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪವೂ ವ್ಯಕ್ತವಾಯಿತು.