ನ್ಯೂಸ್ ನಾಟೌಟ್: ಮುಹಮ್ಮದ್ ಮಸೂದ್ ಎಂಬ ಯುವಕ ಬೆಳ್ಳಾರೆಯ ಕಳಂಜ ಗ್ರಾಮದಲ್ಲಿ ಎಂಟು ಮಂದಿ ಯುವಕರ ತಂಡದಿಂದ ಮಾರಣಾಂತಿಕವಾಗಿ ಹಲ್ಲೆಗೀಡಾಗಿ ಆಸ್ಪತ್ರೆಯಲ್ಲಿ ನಿಧನವಾಗಿದ್ದಾನೆ. ನಿನ್ನೆ (೧೨ ಗಂಟೆಗೆ) ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಿಗಿ ಪೊಲೀಸ್ ಭದ್ರತೆ ನಡುವೆ ಆತನ ಶವವನ್ನು ಬೆಳ್ಳಾರೆಯ ಮಸೀದಿಯಲ್ಲಿ ತಡರಾತ್ರಿ ದಫನ ಮಾಡಲಾಗಿದೆ. ಈ ಯುವಕ ಹತ್ಯೆಯಾಗುವುದರ ಹಿಂದಿನ ವಾಸ್ತವ ಸತ್ಯವೇನು ಅನ್ನುವುದರ ಕುರಿತು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ. ಎರಡು ಕೋಮಿನ ನಡುವಿನ ಸಂಘರ್ಷದ ವಿಚಾರವೇ ಅಥವಾ ಇದಕ್ಕೆ ಬೇರೆ ಯಾವುದಾದರೂ ಆಯಾಮಗಳಿವೆಯೇ ಅನ್ನುವುದರ ಜಾಡು ಹಿಡಿದು ಹಿಡಿದು ಪೊಲೀಸ್ ತನಿಖೆ ಸಾಗುತ್ತಿದೆ.
ಈ ನಡುವೆ ತುಂಬಾ ವ್ಯವಸ್ಥಿತವಾಗಿ ಘಟನೆಗೆ ಕೋಮು ಬಣ್ಣವನ್ನು ಹಚ್ಚಲಾಗುತ್ತಿದೆ. ಕೆಲವರು ಸಮಯ ಸಾಧಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಹೇಳಿ ಕೇಳಿ ದಕ್ಷಿಣ ಕನ್ನಡ ಜಿಲ್ಲೆ ಮೊದಲೇ ಕೋಮು ಸೂಕ್ಷ್ಮ ವಲಯ. ಇಂತಹ ಒಂದು ಕೋಮು ಕಿಡಿಯನ್ನು ಹಚ್ಚಿ ಬಿಟ್ಟರೆ ಸಾಕು ಅದೆಷ್ಟೋ ಜೀವ ಹಾನಿಯಾಗಬಹುದು, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಬಹುದು, ಕಾನೂನು ಸುವ್ಯವಸ್ಥೆಗೆ ದಕ್ಕೆ ಬರಬಹುದು ಅನ್ನುವ ಕನಿಷ್ಟ ಪರಿಜ್ಞಾನವೂ ಇವರಿಗಿಲ್ಲ. ವಾಸ್ತವ ಸತ್ಯ ಅರಿಯಲು ಪ್ರಯತ್ನ ಪಡದೆ ಇಂತಹ ಹೀನ ರಾಜಕಾರಣ ಮಾಡುವುದು ಅಸಹ್ಯಕರ ಸಂಗತಿಯಲ್ಲದೆ ಮತ್ತೇನೂ ಅಲ್ಲ.
ಒಂದು ಮಾಹಿತಿಯ ಪ್ರಕಾರ ಮಸೂದ್ ಕೊಲೆಯಾಗುವ ಸಂದರ್ಭದಲ್ಲಿ ಆತನ ಜತೆಗೆ ಆತನ ಸಮುದಾಯದ ಇಬ್ಬರು ಸ್ನೇಹಿತರು ಕೂಡ ಜತೆಗಿದ್ದರು ಎನ್ನಲಾಗುತ್ತಿದೆ. ಮೈ ತಾಗಿತು ಅನ್ನುವ ಕ್ಷುಲ್ಲಕ ವಿಚಾರಕ್ಕೆ ಮೊದಲು ಮಸೂದ್ ಜತೆಗೆ ಹೊಡೆದಾಟವಾಗಿತ್ತು. ನಂತರ ಇದನ್ನು ರಾಜಿಯಲ್ಲಿ ಇತ್ಯರ್ಥ ಮಾಡುವ ಎಂದು ಹೇಳಿ ಮಸೂದ್ ನನ್ನು ಕರೆದುಕೊಂಡು ಬಂದಿದ್ದು ಆತನ ಸ್ನೇಹಿತರಿಬ್ಬರು. ಈ ಸಂದರ್ಭದಲ್ಲಿ ಮಸೂದ್ ಹಾಗೂ ಯುವಕರ ತಂಡದ ನಡುವೆ ಮಾತಿಗೆ ಮಾತು ಬೆಳೆಯುತ್ತದೆ. ಕೈಕೈ ಮಿಲಾಯಿಸಿಕೊಳ್ಳುತ್ತಾರೆ. ಎಂಟು ಮಂದಿ ಮಸೂದ್ ಮೇಲೆ ಮುಗಿಬಿದ್ದು ಹಲ್ಲೆ ನಡೆಸಿದ್ದಾರೆ. ಮಸೂದ್ ಅಲ್ಲಿಂದ ಓಡುವ ಪ್ರಯತ್ನ ನಡೆಸಿದಾಗ ಸ್ವಲ್ಪ ದೂರ ಹೋಗಿಬಿದ್ದಿದ್ದಾನೆ. ತೀವ್ರ ರಕ್ತಸ್ರಾವವಾಗಿತ್ತು. ಇದಾದ ಎರಡು ಗಂಟೆ ಕಳೆದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟು ಹೊತ್ತಿಗೆ ಆತನ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ಆತ ಸಾವಿಗೀಡಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಇಲ್ಲಿ ಮುಖ್ಯವಾಗಿ ಪ್ರಶ್ನೆ ಮೂಡುವುದು ಮಸೂದ್ ಜತೆಗೆ ಬಂದಿದ್ದ ಸ್ನೇಹಿತರು ಇದನ್ನು ತಡೆಯುವ ಪ್ರಯತ್ನವನ್ನು ಏಕೆ ಮಾಡಲಿಲ್ಲ? ತಡೆಯಲು ಸಾಧ್ಯವಾಗದಿದ್ದರೂ ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನವನ್ನಾದರೂ ನಡೆಸಬಹುದಿತ್ತಲ್ವ? ಅಥವಾ ಈ ವಿಚಾರವನ್ನು ತಮ್ಮ ಸಮುದಾಯದವರಿಗೆ ಅಥವಾ ಮಸೂದ್ ಮನೆಯವರಿಗೆ ಏಕೆ ಹೇಳಲಿಲ್ಲ? ಎನ್ನುವುದಾಗಿದೆ. ಅಲ್ಲದೆ ಕೆಲವು ದಿನಗಳಿಂದ ಬೆಳ್ಳಾರೆಯಲ್ಲಿ ಗಾಂಜಾ ಮಾಫಿಯಾ ಹೆಚ್ಚಾಗುತ್ತಿದ್ದು ಇದು ಕೂಡ ಹತ್ಯೆಗೆ ಕಾರಣವಾಗಿರಬಹುದೇ? ಅನ್ನುವಂತಹ ಅನುಮಾನಗಳು ಕೂಡ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿಯೂ ಏನಾದರೂ ಲಿಂಕ್ ಗಳಿವೆಯೇ ಅನ್ನುವುದರ ಬಗ್ಗೆ ಪೊಲೀಸ್ ತನಿಖೆ ನಡೆಯಬೇಕಿದೆ.
ಈಗಷ್ಟೇ ೮ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರನ್ನು ಚೆನ್ನಾಗಿ ಬೆಂಡೆತ್ತಿ ತನಿಖೆ ಮಾಡಿದ್ದೇ ಆದರೆ ಒಂದಷ್ಟು ಸತ್ಯ ವಿಚಾರಗಳು ಹೊರಬರಬಹುದು. ಅಲ್ಲದೆ ಮಸೂದ್ ಜತೆಗೆ ಬಂದಿದ್ದವರನ್ನೂ ಪೊಲೀಸರು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಬೇಕಿದೆ. ಈ ಮೂಲಕ ಸತ್ಯಾಂಶವನ್ನು ಜನರ ಮುಂದೆ ಇಟ್ಟರೆ ಮುಂದಿನ ಅನಾಹುತಗಳನ್ನು ತಪ್ಪಿಸಬಹುದು. ಚುನಾಯಿತ ಪ್ರತಿನಿಧಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಪ್ರಜ್ಞಾವಂತ ನಾಗರಿಕರು ಒಟ್ಟಾಗಿ ಜವಾಬ್ದಾರಿಯಿಂದ ವರ್ತಿಸಿದರೆ ಸುಳ್ಯ ತಾಲೂಕಿನಲ್ಲಿ ಮುಂದಾಗುವ ದೊಡ್ಡ ಕೋಮು ಗಲಭೆಯನ್ನು ತಪ್ಪಿಸಬಹುದು. ಯಾವುದೋ ಒಂದು ವೈಯಕ್ತಿಕ ಗಲಾಟೆಯನ್ನು ಇನ್ಯಾವುದಕ್ಕೋ ಲಿಂಕ್ ಮಾಡಿ ಇಡೀ ಸಮಾಜಕ್ಕೆ ಅದನ್ನು ಪಸರಿಸಿ ಕೋಮು ಸಂಘರ್ಷವಾಗಿ ಪರಿವರ್ತಿಸುವ ವಿಕೃತ ಮನಸ್ಸುಗಳ ಪ್ರಯತ್ನಕ್ಕೆ ಕಡಿವಾಣ ಹಾಕಬೇಕಿದೆ. ದೇಶದ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಮಾಜಕ್ಕೆ ಸಾರಬೇಕಿದೆ.