ನ್ಯೂಸ್ ನಾಟೌಟ್: ಅಂಗನವಾಡಿಗಳ ಜತೆಗೆ ಒಂದು ಮತ್ತು ಎರಡನೇ ತರಗತಿಗಳನ್ನು ಸಂಯೋಜಿಸಿ ಶಾಲಾ ಸಾಂಸ್ಥಿಕ ಸ್ವರೂಪ ನೀಡಲು, ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿಯರೆಂದು ಪರಿಗಣಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸು ಮಾಡಿದೆ. ಉತ್ತರಾಖಂಡ ರಾಜ್ಯವು ಇದನ್ನು ಜಾರಿ ಮಾಡಿದ್ದು, ಕರ್ನಾಟಕವೂ ಅನುಷ್ಠಾನಕ್ಕೆ ಮುಂದಾಗಿದೆ.
ಎನ್ಇಪಿ ಆಶಯವನ್ನು ದೇಶದ ಎಲ್ಲ ರಾಜ್ಯಗಳೂ ಅನುಷ್ಠಾನಕ್ಕೆ ತಂದರೆ 13,13,935 ಅಂಗನವಾಡಿ ಕಾರ್ಯಕರ್ತೆಯರು ಶಿಕ್ಷಕಿಯರ ಗೌರವಕ್ಕೆ ಪಾತ್ರರಾಗಲಿದ್ದಾರೆ. ಅವರು ಪಡೆಯುತ್ತಿರುವ ₹10 ಸಾವಿರ ಗೌರವಧನ ವೇತನವಾಗಿ ಪರಿವರ್ತನೆಯಾಗಲಿದೆ. ಜತೆಗೆ ಸೇವಾ ಭದ್ರತೆಯೂ ದೊರಕಲಿದೆ. ಈಗಾಗಲೇ ಉತ್ತರಾಖಂಡ ರಾಜ್ಯ ಎನ್ಇಪಿಯ 1ನೇ ಅಧ್ಯಾಯವನ್ನು ಜಾರಿಗೊಳಿಸಿದ್ದು ಅಲ್ಲಿನ 4,457 ಅಂಗನವಾಡಿಗಳಿಗೆ ಶಾಲಾ ಸಾಂಸ್ಥಿಕ ಸ್ವರೂಪ ನೀಡಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.