ನ್ಯೂಸ್ ನಾಟೌಟ್: ಒಮ್ಮತದ ಸಂಬಂಧದಿಂದ ಅವಿವಾಹಿತೆ ಗರ್ಭಧರಿಸಿದ್ದರೆ, ಆಕೆ ಇಚ್ಛಿಸಿದರೆ ಗರ್ಭಪಾತಕ್ಕೆ ಅವಕಾಶ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪೊಂದನ್ನು ಹೊರಡಿಸಿದೆ.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಸೂರ್ಯ ಕಾಂತ್ ಮತ್ತು ಎ.ಎಸ್.ಬೋಪಣ್ಣ ಅವರ ಪೀಠವು, ಅವಿವಾಹಿತೆ ಪರೀಕ್ಷಿಸಲು ಇಬ್ಬರು ವೈದ್ಯರ ವೈದ್ಯಕೀಯ ಮಂಡಳಿಯನ್ನು ಸ್ಥಾಪಿಸಲು ಏಮ್ಸ್ ನಿರ್ದೇಶಕರಿಗೆ ನಿರ್ದೇಶನ ನೀಡಿದೆ. ಎಂಟಿಪಿ ಕಾಯ್ದೆಯ ಸೆಕ್ಷನ್ 3(2)(ಡಿ) ಅಡಿಯಲ್ಲಿ ಮಂಡಳಿ ರಚಿಸಬೇಕು. ಆಕೆಯ ಜೀವಕ್ಕೆ ಅಪಾಯ ಆಗದಂತೆ ಗರ್ಭಪಾತ ಮಾಡಬೇಕು ಎಂದು ಆದೇಶಿಸಿತು. ವೈದ್ಯಕೀಯ ಗರ್ಭಪಾತ ಕಾಯ್ದೆಗೆ 2021ರಲ್ಲಿ ತಂದಿರುವ ತಿದ್ದುಪಡಿಯು ಅವಿವಾಹಿತೆಯೂ ಒಳಗೊಳ್ಳುವಂತೆ ಪತಿಗೆ ಬದಲಾಗಿ ʼಪಾರ್ಟ್ನರ್ʼ ಎಂಬ ಪದ ಬಳಸಿದೆ ಎಂದು ಪೀಠವು ಹೇಳಿದೆ. ಒಮ್ಮತದ ಸಂಬಂಧದಿಂದ ಗರ್ಭಧರಿಸಿದ್ದ 25 ವರ್ಷದ ಅವಿವಾಹಿತೆಯೊಬ್ಬರು ದೆಹಲಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ತನಗೆ ಬೇಡವಾದ 24 ವಾರಗಳ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಕೋರ್ಟ್ಗೆ ಮನವಿ ಮಾಡಿದ್ದರು. ಆದರೆ ಜು.16 ಅನುಮತಿ ನಿರಾಕರಿಸಿ ಕೋರ್ಟ್ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅವಿವಾಹಿತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.