ನ್ಯೂಸ್ ನಾಟೌಟ್: ಕ್ರಿಕೆಟ್ ಲೋಕದ ಮಾಸ್ಟರ್ ಬ್ಲಾಸ್ಟರ್, ಅಭಿಮಾನಿಗಳ ಪಾಲಿನ ಆರಾಧ್ಯ ದೈವ, ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಉಡುಪಿಯ ಕಲಾವಿದನ ಪ್ರತಿಭೆ ಕಂಡು ಬೆರಗಾಗಿದ್ದಾರೆ. ಮಾತ್ರವಲ್ಲ ಕಲಾವಿದನಿಗೆ ಉಡುಗೊರೆ ಕಳಿಸಿ ಸಚಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉಡುಪಿ ಮರ್ಣೆಯ ಕಲಾವಿದ ಮಹೇಶ್ ಅಶ್ವಥ ಎಲೆಯ ಮೇಲೆ ಸಚಿನ್ ಚಿತ್ರವನ್ನು ರಚಿಸಿ ಅದಕ್ಕೊಂದು ಫ್ರೇಮ್ ಹಾಕಿಸಿ ಸಚಿನ್ ಅವರ ಮುಂಬೈ ನಿವಾಸಕ್ಕೆ ಕೊರಿಯರ್ ಮಾಡಿದ್ದರು. ಅಚ್ಚರಿ ಎಂಬಂತೆ ಇದನ್ನು ಸಚಿನ್ ನೋಡಿ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ. ಮಹೇಶ್ ರಚಿಸಿದ ಚಿತ್ರದಲ್ಲಿ ಅಡಗಿದ ನಿಷ್ಕಲ್ಮಶ ಪ್ರೀತಿಗೆ ತಲೆಬಾಗಿದ ಸಚಿನ್ ತನ್ನ ಹಸ್ತಾಕ್ಷರ ಇರುವ ಎರಡು ಫೋಟೋ ಸಹಿತ ಕಲಾವಿದನಿಗೆ ಪ್ರಶಂಸಾ ಪತ್ರ ಕಳುಹಿಸಿದ್ದಾರೆ. ತನ್ನ ಹಸ್ತಾಕ್ಷರದೊಂದಿಗೆ ವೃತ್ತಿ ಜೀವನದಲ್ಲಿ 100ನೇ ಸೆಂಚುರಿ ಬಾರಿಸಿರುವ ಕ್ಷಣದ ಅಮೂಲ್ಯ ಭಾವಚಿತ್ರ, ವರ್ಲ್ಡ್ ಕಪ್ ಎತ್ತಿರುವ ಚಿತ್ರದ ಜತೆ ಪ್ರಶಂಸಾ ಪತ್ರವನ್ನೂ ಲಗತ್ತಿಸಿ ಕಳುಹಿಸಿದ್ದಾರೆ.