ನ್ಯೂಸ್ ನಾಟೌಟ್ : ಒಂದು ಕಡೆ ಜುಲೈ೧ ರಿಂದ ಟೋಲ್ ಶುಲ್ಕ ಶೇ೨೦ರಷ್ಟು ಹೆಚ್ಚಳವಾಗಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಮತ್ತೊಂದು ಕಡೆಗೆ ಟೋಲ್ ಗಳಲ್ಲಿ ಪ್ರಯಾಣ ಮಾಡದಿದ್ದರೂ ಗ್ರಾಹಕರೊಬ್ಬರಿಗೆ ಬಿಲ್ ಹಾಕಿ ಬರೆ ಎಳೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಎಲ್ಲ ಕಾರು ಮಾಲೀಕರಂತೆ ಬೆಳ್ತಂಗಡಿಯ ರವಿ ಪರಕಜೆ ಎನ್ನುವ ಗ್ರಾಹಕರೂ ಕೂಡ ತಮ್ಮ ಕಾರಿಗೆ ಫಾಸ್ಟ್ಯಾಗ್ ಅಳವಡಿಸಿಕೊಂಡಿದ್ದಾರೆ. ಹೈವೆಗಳಲ್ಲಿ ತಡೆ ರಹಿತ ಪ್ರಯಾಣದ ಉದ್ದೇಶ ಹೊಂದಿದ್ದ ರವಿ ಅವರಿಗೆ ಈಗ ಫಾಸ್ಟ್ಯಾಗ್ ಅಳವಡಿಕೆ ಮಾಡಿದ್ದೇ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಯಾವ ಟೋಲ್ ನಲ್ಲಿಯೂ ಪ್ರಯಾಣ ಮಾಡದಿದ್ದರೂ ಅವರ ಖಾತೆಯಿಂದ 25 ರು. ಹಣವನ್ನು ಭಾನುವಾರ ರಾತ್ರಿ ಹನ್ನೊಂದು ಗಂಟೆಗೆ ಟೋಲ್ ಹೆಸರಿನಲ್ಲಿ ಕಿತ್ತುಕೊಳ್ಳಲಾಗಿದೆ. ಕಾರು ಹಾಗೂ ಮಾಲೀಕ ಮನೆಯಲ್ಲಿದ್ದರೂ ದೂರದ ಬೆಂಗಳೂರಿನಿಂದ ನವಯುಗ ಬೆಂಗಳೂರು ಟೋಲ್ ವೇ ನಿಂದ ಟೋಲ್ ಬಿಲ್ ಹೇಗೆ ಬಂದಿದ್ದು ಎಂದು ರವಿಯವರು ತಲೆ ಕೆಡಿಸಿಕೊಂಡಿದ್ದಾರೆ.
ಟೋಲ್ ನವರಿಗೆ ಹಿಡಿಶಾಪ ಹಾಕುತ್ತಾ ರವಿ ಪರಕಜೆಯವರು FASTTAG APP ನಲ್ಲಿ ತಮ್ಮ ದೂರನ್ನು ಸಲ್ಲಿಸಿದ್ದಾರೆ. ರವಿ ಅವರಲ್ಲದೇ ಹಲವಾರು ಕಾರು ಮಾಲೀಕರಿಗೆ ಇಂತಹ ಅನುಭವ ಆಗಿದೆ ಎನ್ನುವಂತಹ ದೂರುಗಳು ಕೇಳಿ ಬರುತ್ತಿವೆ. ಇದೆಲ್ಲದರ ನಡುವೆ ಫಾಸ್ಟ್ಯಾಗ್ ಎಷ್ಟರ ಮಟ್ಟಿಗೆ ಪಾರದರ್ಶಕವಾಗಿದೆ ಎನ್ನುವುದರ ಬಗ್ಗೆ ಚರ್ಚೆ ಜಾಲತಾಣಗಳಲ್ಲಿ ಶುರುವಾಗಿದೆ.
ಟೋಲ್ ಗಳು ಗ್ರಾಹಕರನ್ನು ಸುಖಾಸುಮ್ಮನೆ ಸುಲಿಗೆ ಮಾಡುವ ಮೂಲಕ ಹಗಲು ದರೋಡೆಗೆ ಇಳಿದಿವೆ ಎನ್ನುವಂತಹ ಟೀಕೆ ವ್ಯಕ್ತವಾಗುತ್ತಿದೆ. ಹಣವನ್ನು ಮೂರನೇ ವ್ಯಕ್ತಿ ದುರ್ಬಳಕೆ ಮಾಡುತ್ತಿರುವನೋ ಎಂಬ ಆತಂಕಕ್ಕೂ ಕಾರಣವಾಗಿದೆ. ಈ ಕುರಿತಂತೆ ಸರಕಾರ ಗಂಭೀರ ಕ್ರಮ ತೆಗೆದುಕೊಳ್ಳಬೇಕಿದೆ.