ನ್ಯೂಸ್ ನಾಟೌಟ್: ಮನೆಯಲ್ಲಿರುವ ಪುಟ್ಟ ಮಕ್ಕಳು, ವೃದ್ಧರ ಬಗ್ಗೆ ಈ ಕೂಡಲೇ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾದ ಸಮಯ ಬಂದಿದೆ.
ಹೌದು, ಕೇರಳದಲ್ಲಿ ಪತ್ತೆಯಾಗಿದ್ದ ಅತಿ ಸಾಂಕ್ರಾಮಿಕ ಎನಿಸಿರುವ ನೊರೊ ವೈರಸ್ ಇದೀಗ ಸದ್ದಿಲ್ಲದೆ ಕರಾವಳಿಗೂ ಕಾಲಿಡುವ ಆತಂಕ ಕಾಡುತ್ತಿದೆ. ಕಳೆದೆರಡು ದಿನಗಳ ಹಿಂದೆ ಕೇರಳದಲ್ಲಿ ಇಬ್ಬರು ಮಕ್ಕಳಲ್ಲಿ ನೊರೊ ವೈರಸ್ ಪತ್ತೆಯಾಗಿತ್ತು. ಸಾಮಾನ್ಯವಾಗಿ ಇದು ಕಲುಷಿತ ನೀರು, ಆಹಾರದ ಮೂಲಕ ವೈರಸ್ ಹರಡುತ್ತದೆ. ವಾಂತಿ, ಭೇದಿ, ಹೊಟ್ಟೆನೋವು, ಜ್ವರ, ತಲೆನೋವು, ಮೈಕೈ ನೋವು ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತದೆ. ಮಕ್ಕಳು , ವೃದ್ಧರಲ್ಲಿ ಗಂಭೀರ ದುಷ್ಪರಿಣಾಮವನ್ನು ಈ ಸೋಂಕು ಉಂಟು ಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಸುಳ್ಯ, ಪುತ್ತೂರು ಭಾಗದಲ್ಲೂ ಕೆಲವರಲ್ಲಿ ವಾಂತಿ, ಭೇದಿ, ಹೊಟ್ಟೆನೋವು, ಜ್ವರ, ತಲೆನೋವು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ. ಇದು ಒಬ್ಬರಿಗೊಬ್ಬರಿಗೆ ಹರಡುವ ಸೋಂಕಾಗಿದ್ದು ಹೆಚ್ಚು ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆ ಇದೆ.