ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ 2018ರ ಆಗಸ್ಟ್ ನಲ್ಲಿ ಸುರಿದ ಭಾರಿ ಮಳೆಯಿಂದ ನೆಲೆ ಕಳೆದುಕೊಂಡು ಮನೆ ಹಸ್ತಾಂತರಕ್ಕೆ ಬಾಕಿ ಇದ್ದ 75 ಕುಟುಂಬಗಳಿಗೆ ಪ್ರಾದೇಶಿಕ ಸಾರಿಗೆ ಕಚೇರಿ ಬಳಿ ನಿರ್ಮಿಸಲಾಗಿರುವ ಮನೆಗಳನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಚೀಟಿ/ಲಾಟರಿ ತೆಗೆಯುವ ಮೂಲಕ ಮನೆ ಹಂಚಿಕೆ ಮಾಡಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂ ಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ರಾಜೀವ್ ಗಾಂಧಿ ವಸತಿ ನಿಗಮದ ಎಂಜಿನಿಯರ್ ಶ್ರೀನಿವಾಸ್ ಹಾಗೂ ಫಲಾನುಭವಿಗಳ ಸಮ್ಮುಖದಲ್ಲಿ ಚೀಟಿ ತೆಗೆಯುವ ಮೂಲಕ ಮನೆ ಹಂಚಿಕೆ ಮಾಡಲಾಯಿತು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು 2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿದ್ದ ಕುಟುಂಬಗಳಿಗೆ ಮೊದಲ ಹಂತದಲ್ಲಿ ಕರ್ಣಂಗೇರಿಯಲ್ಲಿ 35 ಮನೆಗಳು, ಮಾದಾಪುರ ಬಳಿಯ ಜಂಬೂರಿನಲ್ಲಿ383, ಮದೆನಾಡು ಬಳಿ 80 ಮನೆಗಳು, ಹಾಗೆಯೇ ಹಾಕತ್ತೂರು ಬಳಿಯ ಬಿಳಿಗೇರಿಯಲ್ಲಿ22, ಮತ್ತು ಗಾಳಿಬೀಡು ಬಳಿ 140 ಮನೆಗಳು ಸೇರಿದಂತೆ ಒಟ್ಟು ಮೂರು ಹಂತದಲ್ಲಿ 660 ಮನೆಗಳನ್ನು ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆ. ಉಳಿದಂತೆ ಕೆ.ನಿಡುಗಣೆ ಗ್ರಾ.ಪಂ.ವ್ಯಾಪ್ತಿಯ ಆರ್ ಟಿ ಒ ಕಚೇರಿ ಬಳಿ 75 ಮನೆಗಳನ್ನು ನಿರ್ಮಿಸಲಾಗಿದ್ದು, ಆ ನಿಟ್ಟಿನಲ್ಲಿಬುಧವಾರ ಮನೆ ಹಂಚಿಕೆ ಪ್ರಕ್ರಿಯೆ ಮಾಡಲಾಗಿದೆ. ಉಳಿದಂತೆ ಈ ತಿಂಗಳ ಅಂತ್ಯದೊ ಳಗೆ ಸಂತ್ರಸ್ತರಿಗೆ ಮನೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದರು. ಮನೆ ಹಂಚಿಕೆಯ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿಯ ಸೂಚನಾ ಫಲಕದಲ್ಲಿ ಅಥವಾ ವೆಬ್ ಸೈಟ್ http://www.kodagu.nic.in ಪ್ರಕಟಿಸಲಾಗಿದ್ದು, ಸಂತ್ರಸ್ತಕುಟುಂಬದವರು ಯಾವ ನಂಬರಿನ ಮನೆ ಯಾವ ಕುಟುಂಬಕ್ಕೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.