ನ್ಯೂಸ್ ನಾಟೌಟ್: ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಜೇನು ಪೆಟ್ಟಿಗೆ ಇಟ್ಟು ಕೃಷಿ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಬೆನ್ನಲ್ಲೇ ಕಳ್ಳರು ಕೂಡ ಜೇನು ಪೆಟ್ಟಿಗೆಯನ್ನು ಕದಿಯಲು ಶುರು ಮಾಡಿದ್ದು ಸಂಪಾಜೆಯ ಜೇನು ಕೃಷಿಕರು ಕಂಗಾಲಾಗಿದ್ದಾರೆ.
ಹೌದು, ಕಳೆದೆರಡು ದಿನಗಳ ಹಿಂದೆ ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ರಮೇಶ್ ಗೌಡ ಎಂಬುವವರಿಗೆ ಸೇರಿದ ತೋಟದಲ್ಲಿ ಇಟ್ಟಿದ್ದ ನಾಲ್ಕು ಜೇನು ಪೆಟ್ಟಿಗೆ ಕಾಣೆಯಾಗಿದೆ. ಈ ಕುರಿತಂತೆ ಕಲ್ಲುಗುಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗೂನಡ್ಕ ಸಮೀಪದ ಅಂಚೆ ಕಚೇರಿಯ ಮುಂಭಾಗದಲ್ಲಿರುವ ರಮೇಶ್ ಗೌಡ ಮನೆಯಲ್ಲಿ ಜೇನು ಪೆಟ್ಟಿಗೆ ಇರಿಸಲಾಗಿದೆ. ಇದನ್ನು ನೋಡಿದ್ದ ಸ್ಥಳೀಯ ವ್ಯಕ್ತಿಯೊಬ್ಬ ಜೇನು ಪೆಟ್ಟಿಗೆ ಬೇಕೆಂದು ಕೇಳಿದ್ದ. ಆದರೆ ರಮೇಶ್ ಗೌಡ ಮನೆಯವರು ಅದು ನಮ್ಮ ಪೆಟ್ಟಿಗೆಯಲ್ಲ. ಬೇರೆಯವರು ನಮ್ಮ ತೋಟದಲ್ಲಿ ಇರಿಸಿದ್ದಾರೆ ಎಂದು ಆತನಿಗೆ ಉತ್ತರಿಸಿದ್ದಾರೆ. ಆ ವ್ಯಕ್ತಿ ಹಾಗೆ ಕೇಳಿ ಹೋದ ಮರುದಿನವೇ ರಮೇಶ್ ಅವರ ಮನೆಯಲ್ಲಿದ್ದ ಜೇನು ಪೆಟ್ಟಿಗೆ ಕಳ್ಳತನ ಆಗಿದ್ದರಿಂದ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ನೆಕ್ಕಿಲದ ವ್ಯಕ್ತಿಯೊಬ್ಬನನ್ನು ಪೊಲೀಸರು ವಿಚಾರಿಸಿದ್ದಾರೆ. ಆತ ಅಲ್ಲ ಎಂದು ತಿಳಿದು ಬಂದಿದ್ದರಿಂದ ಬಿಟ್ಟು ಕಳಿಸಲಾಗಿದೆ. ಜೇನು ಕಳ್ಳತನದಲ್ಲಿ ಭಾಗಿಯಾಗಿದ್ದಾನೆ ಎಂದು ಸಂಶಯಿಸಲ್ಪಟ್ಟಿದ್ದ ವ್ಯಕ್ತಿ ಗಡ್ಡ ಬಿಟ್ಟುಕೊಂಡಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಮನೆಯವರು ತಿಳಿಸಿದ್ದಾರೆ. ಸದ್ಯ ಕಲ್ಲುಗುಂಡಿ ಪೊಲೀಸರು ತನಿಖೆ ನಡೆಸುತ್ತಿದ್ದು ಶೀಘ್ರವೇ ಕಳ್ಳನ ಬಂದಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.