ನ್ಯೂಸ್ ನಾಟೌಟ್: ಮಹಿಳೆಯೊಬ್ಬಳನ್ನು ಕೊಂದು ಹೋದ ಕಾಡೆನೆಯೊಂದು ಆಕೆಯ ಅಂತ್ಯ ಸಂಸ್ಕಾರದ ಸ್ಥಳಕ್ಕೂ ಬಂದು ಮೃತ ದೇಹವನ್ನು ಎತ್ತಿ ಬಿಸಾಡಿ ರಂಪಾಟ ಮಾಡಿ ಓಡಿದ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಗಜರಾಜನ ಉಗ್ರ ಕೋಪದ ಸುದ್ದಿ ಎಲ್ಲ ಕಡೆ ವೈರಲ್ ಆಗಿದೆ.
ಮಯೂರ್ ಗಂಜ್ ಜಿಲ್ಲೆಯ ರಾಸಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಲ್ಮ ವನ್ಯಜೀವಿ ಅಭಯಾರಣ್ಯ ಬಳಿಯ ರಾಯ್ಪಾಲ್ ಗ್ರಾಮದ ನಿವಾಸಿ ಮಾಯ ಮುರ್ಮು ಎಂದಿನಂತೆ ಕೊಳವೆ ಬಾವಿಯಿಂದ ನೀರು ತರಲು ಹೋಗಿದ್ದರು. ಮಡಿಕೆಯಲ್ಲಿ ನೀರು ತುಂಬುತ್ತಿದ್ದಾಗ ಕಾಡಾನೆಯೊಂದು ಬಂದು ಆಕೆಯ ಮೇಲೆ ದಾಳಿ ಮಾಡಿದೆ. ಹಲವಾರು ಬಾರಿ ನೆಲಕ್ಕೆ ಬಡಿದು ಕಾಲುಗಳಿಂದ ತುಳಿದು ಹಾಕಿದೆ. ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಮನೆಯವರು ಮತ್ತು ಗ್ರಾಮಸ್ಥರು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಂಜೆಯ ವೇಳೆಗೆ ಕುಟುಂಬದವರು ಮಾಯ ಅವರ ಅಂತಿಮ ವಿವಿಧಾನಗಳನ್ನು ನೆರವೇರಿಸಿ ಚಿತೆಯ ಮೇಲೆ ಪಾರ್ಥೀವ ಶರೀರವನ್ನು ಇಟ್ಟು ಅಂತ್ಯ ಸಂಸ್ಕಾರಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಅದೇ ಆನೆ ಏಕಾಏಕಿ ಅಲ್ಲಿಗೆ ಬಂದು ಚಿತೆಯ ಮೇಲಿದ್ದ ದೇಹವನ್ನು ಎತ್ತಿ ನೆಲಕ್ಕೆ ಎಸೆದು ಕಾಲಿನಿಂದ ತುಳಿದು ಹಾಕಿದೆ. ಅಂತಿಮವಾಗಿ ತನ್ನ ಕೋರೆಗಳಿಂದ ಶವವನ್ನು ಎತ್ತಿ ಪಕ್ಕಕ್ಕೆ ಎಸೆದು ಓಡಿಹೋಗಿದೆ. ಆನೆ ಹೋದ ನಂತರ ಗ್ರಾಮದ ಜನರು ಮೃತದೇಹವನ್ನು ಎತ್ತಿ ಚಿತೆಯ ಮೇಲಿಟ್ಟು ಅಂತಿಮ ವಿದಿವಿಧಾನ ನೆರವೇರಿಸಿದರು.