ನ್ಯೂಸ್ ನಾಟೌಟ್: ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ರಾಜಕೀಯ ಮೇಳಾಟಕ್ಕೆ ದಲಿತ ವರ್ಗಕ್ಕೆ ಸೇರಿದ ಸರಕಾರಿ ನೌಕರ ಅಮಾನತುಗೊಂಡ ವಿಚಾರ ದೊಡ್ಡ ಸುದ್ದಿಯಾಗಿದೆ.
ಹೌದು, ಎರಡು ಸಲ ಅತ್ಯುತ್ತಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜ್ಯ ಪ್ರಶಸ್ತಿ ಪಡೆದಿದ್ದ ಶಿರಾಡಿಯ ಪಿಡಿಒ ಪಿ.ವೆಂಕಟೇಶ್ ಅವರನ್ನು ಕರ್ತವ್ಯ ಲೋಪದ ಆರೋಪ ಹೊರಿಸಿ ಇಲಾಖೆ ವತಿಯಿಂದ ಯಾವುದೇ ತನಿಖೆ ನಡೆಸದೆ ದಿಢೀರ್ ಶಿರಾಡಿ ಗ್ರಾಮ ಪಂಚಾಯತ್ ನಿಂದ ಅಮಾನತುಗೊಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಾನತುಗೊಳಿಸಿದ್ದರ ಹಿಂದೆ ರಾಜಕೀಯ ಕಾರಣ ಇದೆ ಎನ್ನುವ ದೂರು ಸಾರ್ವಜನಿಕ ವಲಯಗಳಿಂದ ಕೇಳಿ ಬರುತ್ತಿದೆ. ವೆಂಕಟೇಶ್ ಅಮಾನತಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಶಿರಾಡಿಯ ಸ್ಥಳೀಯರು ಪ್ರತಿಭಟನೆಗೆ ಮುಂದಾಗಿದ್ದಾರೆ.
ವೆಂಕಟೇಶ್ ಅಮಾನತು ವಿರೋಧಿಸಿ ಶಿರಾಡಿ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಬಗ್ಗೆ ಸ್ವತಃ ಶಿರಾಡಿ ಗ್ರಾಮಸ್ಥ ಎಲ್ದೊ ಎಂವಿ ಅಡ್ಡೋಲೆ ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಪಂಚಾಯತ್ ಗೆ ಯಾರೇ ಹೋಗಲಿ, ಅವರನ್ನು ಅನಗತ್ಯ ಕಾಯಿಸಿ ನೋಯಿಸುವ ವ್ಯಕ್ತಿತ್ವ ವೆಂಕಟೇಶ್ ಅವರದ್ದಲ್ಲ. ತಾಳ್ಮೆಯಿಂದ ಕುಂದುಕೊರತೆ ಆಲಿಸಿ ಕಷ್ಟ ಎಂದು ಬಂದ ಜನರಿಗೆ ತನ್ನ ಕೈನಿಂದ ಆದ ಸಹಾಯ ಮಾಡುತ್ತಿದ್ದರು. ಆದರೆ ಅವರನ್ನು ಅಮಾನತು ಮಾಡಿರುವುದು ಮನಸ್ಸಿಗೆ ತುಂಬಾ ನೋವಾಗಿದೆ. ಇದು ಗ್ರಾಮದ ಅಭಿವೃದ್ಧಿಗೆ ಮಾಡಿದ ದ್ರೋಹ. ಈ ಕೂಡಲೇ ಅವರ ಅಮಾನತನ್ನು ರದ್ದುಗೊಳಿಸಿ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಲ್ದೊ ಎಚ್ಚರಿಸಿದ್ದಾರೆ.
ವೆಂಕಟೇಶ್ ಅವರು ಯಾವುದೇ ಆಮಿಷಕ್ಕೆ ಬಲಿಯಾಗುತ್ತಿರಲಿಲ್ಲ. ನೇರವಾಗಿ ಜನರ ಕೆಲಸವನ್ನು ಪ್ರಮಾಣಿಕತೆಯಿಂದ ಮಾಡಿಕೊಡುತ್ತಿದ್ದರು. ರಾಜಕೀಯ ಒತ್ತಡಗಳಿಗೆ ಬಗ್ಗುತ್ತಿರಲಿಲ್ಲ ಎಂದು ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಜಗದೀಶ್ ಕೊಯ್ಲಾ ತಿಳಿಸಿದ್ದಾರೆ.
ಪಂಚಾಯತ್ ನಲ್ಲಿ ಉದ್ಯೋಗ ಖಾತರಿಯಲ್ಲಿ ಅವರು ಹೆಚ್ಚು ಕೆಲಸ ಮಾಡುತ್ತಿದ್ದರು. ಮನೆಯ ಕರೆಂಟ್ , ನೀರು ಸೇರಿದಂತೆ ಯಾವುದೇ ವಿಚಾರವಿದ್ದರೂ ಜನರಿಗೆ ತುರ್ತಾಗಿ ಸ್ಪಂದಿಸುತ್ತಿದ್ದರು. ಅವರನ್ನು ಶಿರಾಡಿಯಿಂದ ಅಮಾನತು ಮಾಡಿರುವುದು ರಾಜಕೀಯ ಕಾರಣದಿಂದ. ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಈಗ ಅವಕಾಶ ಇಲ್ಲ. ಕೂಡಲೇ ಅವರ ಅಮಾನತು ಶಿಕ್ಷೆಯನ್ನು ಹಿಂಪಡೆಯಬೇಕು, ಸತ್ಯ ತಿಳಿಯಲು ಆಂತರಿಕ ತನಿಖೆ ನಡೆಸಲಿ ಎಂದು ಜಗದೀಶ್ ಕೊಯ್ಲಾ ಆಗ್ರಹಿಸಿದ್ದಾರೆ.
ಎರಡು ಸಲ ರಾಜ್ಯ ಪ್ರಶಸ್ತಿ ಪಡೆದಿರುವ ಪಿಡಿಒ ಅವರನ್ನು ಅಮಾನತು ಮಾಡಿರುವ ವಿಚಾರ ಗಮನಕ್ಕೆ ಬಂದಿದೆ. ಇಡೀ ನಮ್ಮ ಸಮುದಾಯಕ್ಕೆ ಇದು ಅತ್ಯಂತ ಬೇಸರದ ತರುವ ವಿಚಾರ. ಅದಕ್ಕಿಂತ ಹೆಚ್ಚಾಗಿ ಒಬ್ಬ ಸರಕಾರಿ ನೌಕರನನ್ನು ನಡೆಸಿಕೊಂಡ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆ ತಲೆತಗ್ಗಿಸುವಂತದ್ದಾಗಿದೆ ಎಂದು ಮೊಗೇರ ಸಂಘದ ರಾಜ್ಯಾಧ್ಯಕ್ಷ ವಿಶ್ವನಾಥ್ ತಿಳಿಸಿದ್ದಾರೆ.
ಗುಂಡ್ಯ ಜಂಕ್ಷನ್ನಲ್ಲಿ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಬರುವ ಪ್ರವಾಸಿಗರಿಗಾಗಿ ಅತಿ ಅವಶ್ಯಕವಾಗಿದ್ದ ಶೌಚಾಲಯದ ನಿರ್ಮಾಣವನ್ನು ವೆಂಕಟೇಶ್ ಮಾಡಿಸುವಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸಿದ್ದಾರೆ. ಮೂವತ್ತು ವರ್ಷಗಳಿಂದ ಅಲ್ಲಿಗೆ ಶೌಚಾಲಯದ ಬೇಡಿಕೆ ಇತ್ತು. ಅದನ್ನು ಶಿರಾಡಿಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಇತ್ತೀಚಿಗೆ ವೆಂಕಟೇಶ್ ಮಾಡಿದ್ದರು. ಇಂತಹ ಪ್ರಾಮಾಣಿಕ ಕೆಲಸ ಗಾರನನ್ನು ಕೇವಲ ರಾಜಕೀಯ ಒತ್ತಡಗಳಿಂದ ಮಣಿದು ಸಿಇಒ ಅಮಾನತು ಮಾಡಿರುವುದು ಸರಿಯಲ್ಲ. ಕೂಡಲೇ ಅವರ ಅಮಾನತು ಆದೇಶ ರದ್ದುಗೊಳಿಸಬೇಕು. ಇಲ್ಲದಿದ್ದರೆ ಹತ್ತು ಸಾವಿರ ಮೊಗೇರ ಸಮುದಾಯದ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ವಿಶ್ವನಾಥ್ ಎಚ್ಚರಿಸಿದ್ದಾರೆ. ವೆಂಕಟೇಶ್ ಅವರಿಗೆ ರಾಜ್ಯ ಪ್ರಶಸ್ತಿ ಬಂದಿರುವುದು ಅರ್ಹತೆಯಿಂದ. ಉತ್ತಮ ಕೆಲಸಗಳಿಂದ. ಯಾರು ಸುಮ್ಮನೆ ಪ್ರಶಸ್ತಿ ನೀಡುವುದಿಲ್ಲ. ಅಂತಹ ದಕ್ಷ ಅಧಿಕಾರಿಯನ್ನು ಏಕಾಏಕಿ ಸರಕಾರ ಈ ರೀತಿ ನಡೆಸಿಕೊಂಡಿರುವುದು ನೋವಿನ ವಿಚಾರ ಎಂದು ವಿಶ್ವನಾಥ್ ತಿಳಿಸಿದರು.
ವೆಂಕಟೇಶ್ ಪಿಡಿಒ ಆಗಿ ಕೆಲಸ ನಿರ್ವಹಿಸಿ ಹಲವು ಪಂಚಾಯತ್ ಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಇದೇ ಕಾರಣದಿಂದ ಅವರು ಎರಡು ಸಲ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಬಂಟ್ವಾಳ ಹಾಗೂ ಸುಳ್ಯ ತಾಲೂಕಿನ ವಿವಿಧ ಕಡೆ ವೆಂಕಟೇಶ್ ಕೆಲಸ ನಿರ್ವಹಿಸಿ ಜನ ಮೆಚ್ಚುಗೆ ಗಳಿಸಿದ್ದರು. ಕೆಲವು ತಿಂಗಳ ಹಿಂದೆಯಷ್ಟೇ ಅವರನ್ನು ಬಂಟ್ವಾಳದಿಂದ ದೂರದ ಹಾಸನ ಜಿಲ್ಲೆಯ ಗಡಿ ಭಾಗದಲ್ಲಿರುವ ಶಿರಾಡಿ ಗ್ರಾಮ ಪಂಚಾಯತ್ ಗೆ ವರ್ಗಾವಣೆ ಮಾಡಲಾಗಿತ್ತು. ಇಲ್ಲಿಂದ ಮತ್ತೆ ಬೆಳ್ತಂಗಡಿ ಗ್ರಾಮದ ಚಾರ್ಮಾಡಿಗೆ ವರ್ಗಾವಣೆ ಮಾಡಲಾಗಿತ್ತು. ಇದನ್ನು ವಿರೋಧಿಸಿ ಕಾನೂನು ಹೋರಾಟ ಮಾಡಿದ ವೆಂಕಟೇಶ್ ಅವರು ಮತ್ತೆ ಶಿರಾಡಿ ಗ್ರಾಮದಲ್ಲಿಯೇ ಮತ್ತೆ ಉಳಿದುಕೊಂಡಿದ್ದರು. ಆಗಲೂ ಅವರನ್ನು ಸರಿಯಾಗಿ ಕೆಲಸ ನಿರ್ವಹಿಸುವುದಕ್ಕೆ ಬಿಡದೆ ಕರ್ತವ್ಯ ಲೋಪದ ಸುಳ್ಳು ಆರೋಪ ಹೊರಿಸಿ ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ. ವೆಂಕಟೇಶ್ ಅವರು ಕಾಂಗ್ರೆಸ್ ಗೆ ಬೆಂಬಲ ನೀಡಿದ್ದಾರೆ ಎಂದು ಆರೋಪ ಹೊರಿಸಿ ಪಿತೂರಿ ನಡೆಸಿ ಅಮಾನತು ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸದ್ಯ ಈ ವಿಚಾರ ಚರ್ಚೆಯಲ್ಲಿದ್ದು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತದೆ ಅನ್ನುವುದನ್ನು ಕಾದು ನೋಡಬೇಕಿದೆ.
ಅಮಾನತು ಮಾಡಬೇಕೆಂದರೆ ಪೂರ್ವಭಾವಿಯಾಗಿ ನೋಟಿಸ್ ಕೊಡಬೇಕು. ಆದರೆ ಯಾವುದೇ ನೋಟಿಸ್ ನೀಡದೆ ಸರ್ವಾಧಿಕಾರಿಯಂತೆ ವರ್ತಿಸಿ ಸರಕಾರ ಅವರನ್ನು ಕೆಲಸದಿಂದ ವಜಾ ಮಾಡಿದೆ. ಉತ್ತಮ ಕೆಲಸಗಾರ ಎಂದು ಗುರುತಿಸಿ ರಾಜ್ಯ ಪ್ರಶಸ್ತಿ ನೀಡಿದ ಸರಕಾರವೇ ಅವರನ್ನು ಈಗ ಅಮಾನತು ಮಾಡಿರುವುದು ವಿಪರ್ಯಾಸವೇ ಸರಿ.
ದೇವದಾಸ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ
ವೆಂಕಟೇಶ್ ಸರಳ ಸಜ್ಜನಿಕೆಯ ವ್ಯಕ್ತಿ. ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದರಲ್ಲಿ ಅತ್ಯಂತ ಚುರುಕು ಸ್ವಭಾವ ಹೊಂದಿದ್ದರು. ಶಿರಾಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ಅಮಾನತುಗೊಳಿಸಲಾಯಿತು ಎನ್ನುವ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಗಿದೆ. ಒಬ್ಬ ದಕ್ಷ ಅಧಿಕಾರಿಯನ್ನು ರಾಜಕೀಯ ಕಾರಣಗಳಿಗೆ ಈ ರೀತಿ ನಡೆಸಿಕೊಳ್ಳುವುದರಲ್ಲಿ ಅರ್ಥವಿಲ್ಲ.
ಪ್ರಶಾಂತ್ ರೈ, ಸಿಎ ಬ್ಯಾಂಕ್ ನಿರ್ದೇಶಕರು ನೆಲ್ಯಾಡಿ
ವೆಂಕಟೇಶ್ ಪಿಡಿಒ ಆಗಿದ್ದ ಸಂದರ್ಭದಲ್ಲಿ ಗೋಳಿತೊಟ್ಟಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಜನ ಸ್ನೇಹಿ ಪಿಡಿಒ ಆಗಿ ನಮ್ಮ ಊರಿನಲ್ಲಿ ಹೆಸರುಗಳಿಸಿದ್ದರು. ಇಂದಿಗೂ ನಾವು ಅವರನ್ನು ನೆನಪಿಸಿಕೊಳ್ಳುತ್ತೇವೆ.
ಅಬ್ದುಲ್ ಕುಂಞಿ, ಗೋಳಿತೊಟ್ಟು ಕೊಂಕೋಡಿ ಮನೆ