ನ್ಯೂಸ್ ನಾಟೌಟ್: ಮನಸ್ಸಿನೊಳಗೆ ಅಗಾಧ ನೋವಿದ್ದರೂ ಎಲ್ಲರನ್ನೂ ನಕ್ಕು ನಗಿಸಿ ಚಾರ್ಲಿ ಚಾಪ್ಲಿನ್ ವಿಶ್ವಕ್ಕೆ ಮಾದರಿಯಾದರು. ಹಾಗೆಯೇ ತುಳುನಾಡಿನ ತೆಲಿಕ್ಕೆದ ಬೊಳ್ಳಿ, ಮಿಸ್ಟರ್ ಗುಣನಾಥ್ ಖ್ಯಾತಿಯ ಅರವಿಂದ ಬೋಳಾರ್ ಅನೇಕ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಕಷ್ಟ ನಷ್ಟಗಳ ಮೆಟ್ಟಿಲುಗಳನ್ನು ದಾಟಿ ಇಂದು ಯಶಸ್ವಿ ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿದ್ದಾರೆ.
ಹೌದು, ಅರವಿಂದ್ ಬೋಳಾರ್ ಬಾಲ್ಯದಲ್ಲಿ ಹೆಚ್ಚು ನಾಚಿಕೆ ಸ್ವಭಾವದವರಾಗಿದ್ದರು, ಎಲ್ಲದರಿಂದಲೂ ಸ್ವಲ್ಪ ಹಿಂದೆ ಉಳಿಯುವ ಗುಣವಿತ್ತು. ಯಾರಾದರೂ ಏನಾದರೂ ಅಂದುಕೊಂಡರೇ ಎನ್ನುವ ಕೀಳರಿಮೆಯಿಂದ ಅವಕಾಶಗಳನ್ನು ಕೈಚೆಲ್ಲುತ್ತಿದ್ದರು. ಆದರೆ ಶಾಲೆಯಲ್ಲಿ ಓದುತ್ತಿರುವಾಗ ನಾಟಕದಲ್ಲಿ ಪಾತ್ರ ಮಾಡದೆ ಇದ್ದುದ್ದಕ್ಕೆ ಒಬ್ಬರು ಅಧ್ಯಾಪಕರು ಅವರನ್ನು ಹುಚ್ಚ ಎಂದು ಬೈದಿದ್ದರು. ಇದನ್ನು ಕೇಳಿದ ಬಳಿಕ ನಾನಿನ್ನು ಬದಲಾಗಬೇಕು ಎಂದು ನಿರ್ಧಾರ ಮಾಡಿಕೊಂಡ ಅರವಿಂದ ಬೋಳಾರ್ ನಾಟಕವೊಂದರಲ್ಲಿ ಹುಚ್ಚನ ಪಾತ್ರ ಮಾಡಿ ಅದೇ ಅಧ್ಯಾಪಕರ ಎದುರು ಸೈ ಎನಿಸಿಕೊಂಡಿದ್ದರು. ಅಂದಿನಿಂದ ಆರಂಭವಾದ ಅರವಿಂದ್ ಬೋಳಾರ್ ಅವರ ಕಲಾವಿದನ ಜೀವನ ಇಂದು ಹಲವಾರು ಕಷ್ಟ ನಷ್ಟಗಳನ್ನು ಮೆಟ್ಟಿ ನಿಂತು ಕನ್ನಡದ ಖ್ಯಾತನಾಮರೊಂದಿಗೆ ನಟಿಸುವ ತನಕ ಬಂದಿರುವುದು ಬಹುದೊಡ್ಡ ಸಾಧನೆಯಾಗಿದೆ. ಅಂದು ಶಾಲೆಯಲ್ಲಿ ಮೇಸ್ಟ್ರು ಹುಚ್ಚ ಎಂದು ಬೈಯದೇ ಇರುತ್ತಿದ್ದರೆ ಅಥವಾ ಆ ಮಾತಿನಿಂದ ನೊಂದು ಕೂತಿದ್ದರೆ ಇಂದು ಏನೂ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅರವಿಂದ್ ಬೋಳಾರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
6ನೇ ತರಗತಿಗೆ ವಿಧ್ಯಾಭ್ಯಾಸ ಮೊಟಕುಗೊಳಿಸಿದರು. ಬಳಿಕ ರಾತ್ರಿ ನಾಟಕಗಳ ಪ್ರದರ್ಶನ ನೀಡುತ್ತಿದ್ದರು. ಬೆಳಗ್ಗೆ ಕೆಲಸ ಮಾಡುತ್ತಿದ್ದರು. ವಿವಿಧ ಕೂಲಿ ಕೆಲಸಗಳನ್ನು ಮಾಡುತ್ತಾ ತಮ್ಮ ಪ್ರತಿಭೆಯನ್ನೂ ಬೆಳೆಸಿಕೊಳ್ಳುತ್ತಾ ಸಮಾಜದಲ್ಲಿ ಮಾದರಿಯಾಗಿರುವ ಅರವಿಂದ ಬೋಳಾರ್ ಇಂದು ತುಳುನಾಡಿನ ಅದೆಷ್ಟೋ ಮಂದಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ದೇವದಾಸ್ ಕಾಪಿಕಾಡ್ ಅವರ ನಾಟಕ ತಂಡದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ ಅರವಿಂದ್ ಕಾಪಿಕಾಡ್ ನೇತೃತ್ವದಲ್ಲಿ ಹಲವು ನಾಟಕಗಳಲ್ಲಿ ಅಭಿನಯ ಮಾಡಿ ಮಿಂಚಿದ್ದಾರೆ. ಮೊದ ಮೊದಲು ನಾಟಕ ಪ್ರದರ್ಶನ ಮಾಡಿರುವುದಕ್ಕೆ ಸಂಭಾವನೆಯೇ ಸಿಗುತ್ತಿರಲಿಲ್ಲವಂತೆ. ಒಂದು ಥಾಂಕ್ಸ್ ಶಹಭಾಷ್ ಗಿರಿ ಸಿಕ್ಕರೆ ಅದೇ ದೊಡ್ಡ ಸಂಭಾವನೆ ಎನ್ನುವುದು ಬೋಳಾರ್ ಮಾತಾಗಿದೆ. ಒಟ್ಟಿನಲ್ಲಿ ಅರವಿಂದ್ ಬೋಳಾರ್ ಅವರ ಮುಂದಿನ ವೃತ್ತಿ ಜೀವನದಲ್ಲಿ ಮತ್ತಷ್ಟು ಯಶಸ್ಸು ಸಿಗುವಂತಾಗಲಿ ಎನ್ನುವುದು ನಮ್ಮೆಲ್ಲರ ಆಶಯವಾಗಿದೆ.