ನ್ಯೂಸ್ ನಾಟೌಟ್: ಮದುವೆ ಎಂತಹ ವಿಚಿತ್ರ ಕಾರಣಕ್ಕೆಲ್ಲ ನಿಲ್ಲುತ್ತದೆ ಅನ್ನುವುದಕ್ಕೆ ಇಲ್ಲೊಂದು ಪ್ರತ್ಯಕ್ಷ ಉದಾಹರಣೆಯನ್ನು ಕಾಣಬಹುದಾಗಿದೆ. ಹಾರ ಬದಲಿಸುವ ವೇಳೆ ಮದುವೆ ಮಂಟಪದಲ್ಲಿ ವರನ ಕೈ ಕೊರಳಿಗೆ ತಾಗಿತೆಂದು ವಧು ಮದುವೆಯನ್ನೇ ಅರ್ಧಕ್ಕೆ ನಿಲ್ಲಿಸಿ ಹೊರ ನಡೆದ ಘಟನೆ ವೇಣೂರಿನಲ್ಲಿ ನಡೆದಿದೆ.
ಏನಿದು ಘಟನೆ?
ಮೂಡುಕೋಣಾಜೆಯ ಯುವತಿಯ ಮದುವೆಯನ್ನು ನಾತಾವಿಯ ಯುವಕನೊಂದಿಗೆ ಮೇ೨೫ರಂದು ನಾರಾವಿಯ ಹಾಲ್ ನಲ್ಲಿ ನಿಗದಿಪಡಿಸಲಾಗಿತ್ತು. ಅರ್ಚಕರು ಬಂದವರೇ ಹಾರ ಬದಲಾಯಿಸುವಂತೆ ಹೇಳಿದ್ದರು. ಅದರಂತೆ ವರ ಮೊದಲಿಗೆ ವಧುವಿನ ಕೊರಳಿಗೆ ಹಾರ ಹಾಕುತ್ತಿದ್ದಂತೆ ಆತನ ಕೈ ವಧುವಿನ ಕತ್ತಿಗೆ ತಾಗಿದೆ. ಇದೇ ವಿಚಾರಕ್ಕೆ ವಧು ಆಕ್ಷೇಪ ತೆಗೆದಿದ್ದಾಳೆ. ಎರಡೂ ಕಡೆಯವರಿಗೆ ಮಾತಿಗೆ ಮಾತು ಬೆಳೆದು ಹೊಡೆದಾಟದ ತನಕ ಬಂದು ನಿಂತಿದೆ. ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಎರಡೂ ಕಡೆಯವರನ್ನು ಸಮಾಧಾನ ಪಡಿಸಿದರು. ಆದರೆ ಮದುವೆ ಮಾತ್ರ ಅರ್ಧಕ್ಕೆ ಮುರಿದು ಬಿತ್ತು. ಬಂದವರಿಗಾಗಿ ತಯಾರಿಸಿದ್ದ ಊಟವನ್ನು ಸ್ಥಳೀಯ ಶಾಲೆಯ ಮಕ್ಕಳಿಗೆ ನೀಡಲಾಯಿತು ಎಂದು ತಿಳಿದು ಬಂದಿದೆ.