ನ್ಯೂಸ್ ನಾಟೌಟ್: ಕನ್ನಡ ಪತ್ರಿಕೋದ್ಯಮದ ಪಾಲಿಗೆ ಶುಕ್ರವಾರ ಬ್ಲ್ಯಾಕ್ ಫ್ರೈಡೇ ಆಗಿ ಪರಿಣಮಿಸಿತು. ಒಂದೇ ದಿನ, ಒಂದೇ ಕಾರಣಕ್ಕೆ ಪ್ರತ್ಯೇಕ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಪತ್ರಕರ್ತರು ಹೃದಯಾಘಾತಕ್ಕೆ ಬಲಿಯಾದ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ವಿಜಯ ಕರ್ನಾಟಕ ಬೆಂಗಳೂರು ಆವೃತ್ತಿಯ ಪುಟ ವಿನ್ಯಾಸಕಾರ ಸೂರ್ಯಕುಮಾರ್ (29) ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಇವರು ಈ ಹಿಂದೆ ವಿಜಯವಾಣಿ ಮತ್ತು ಸಿನಿಮಾ ಮಾಸಿಕಗಳಿಗೆ ಡಿಸೈನರ್ ಆಗಿ ಕೆಲಸ ನಿರ್ವಹಿಸಿದ್ದರು. ಇವರು ಮಂಡ್ಯ ಜಿಲ್ಲೆಯ ಬಸರಾಳ ಹತ್ತಿರದ ಗಿಡ್ಡೇಗೌಡನ ಕೊಪ್ಪಲಿನವರಾಗಿದ್ದಾರೆ. ಸೂರ್ಯ ಕುಮಾರ್ ಸಾವಿನ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಕನ್ನಡ ಪ್ರಭ ಪತ್ರಿಕೆಯ ಬೆಂಗಳೂರು ಆವೃತ್ತಿಯ ಹಿರಿಯ ಉಪಸಂಪಾದಕ ಹರೀಶ್ ಹುಲಿಕಟ್ಟೆ (29) ಕೂಡ ಹೃದಯಾಘಾತದಿಂದ ಮೃತಪಟ್ಟ ಸುದ್ದಿ ಬರಸಿಡಿಲಿನಂತೆ ಬಂದೆರಗಿತು. ಮೃತಪಟ್ಟ ಇಬ್ಬರು ಪತ್ರಕರ್ತರು ಕೂಡ ವಿವಾಹಿತರಾಗಿದ್ದಾರೆ. ಇವರ ಅಕಾಲಿಕ ಸಾವನ್ನು ಕುಟುಂಬ ವರ್ಗದವರಿಗೆ ಹಾಗೂ ಮಿತ್ರರಿಗೆ ಅರಗಿಸಿಕೊಳ್ಳುವುದು ಕಷ್ಟವಾಗಿದೆ. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಕಂಬನಿ ಮಿಡಿದಿದ್ದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.
ಕರೋನಾ ವ್ಯಾಕ್ಸಿನ್ ಎಫೆಕ್ಟ್?
ಒಂದೇ ದಿನ ಇಬ್ಬರು ಪತ್ರಕರ್ತರು ಮೃತಪಟ್ಟ ಬೆನ್ನಲ್ಲೇ ಕರೋನಾ ವ್ಯಾಕ್ಸಿನ್ ಬಗ್ಗೆಯೇ ಈಗ ಅನುಮಾನ ಹುಟ್ಟುತ್ತಿದೆ. ಇಷ್ಟು ಸಣ್ಣ ವಯಸ್ಸಿಗೆ ಪತ್ರಕರ್ತರು ಹೃದಯಾಘಾತಕ್ಕೆ ಬಲಿಯಾಗಿರುವುದು ಹೇಗೆ ಅನ್ನುವ ವಿಚಾರ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಕೂಡಲೇ ರಾಜ್ಯ ಸರಕಾರ ಹಾಗೂ ಆರೋಗ್ಯ ಇಲಾಖೆ ಅಗತ್ಯ ಕ್ರಮದ ಮೂಲಕ ವ್ಯಾಕ್ಸಿನ್ ಬಗೆಗಿನ ಗೊಂದಲವನ್ನು ಬಗೆಹರಿಸಬೇಕು, ವ್ಯಾಕ್ಸಿನ್ ನಿಂದಲೇ ಅಡ್ಡ ಪರಿಣಾಮ ಉಂಟಾಗುತ್ತಿದ್ದರೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.