ನ್ಯೂಸ್ ನಾಟೌಟ್: ಈ ರಾಜಕಾರಣಿಗಳ ತಪ್ಪುಗಳನ್ನು ಇನ್ನೊಬ್ಬರು ಬೆರಳು ಮಾಡಿ ತೋರಿಸಿದಾಗ ಅವರಿಗೆ ದಿಢೀರ್ ಕೋಪ ಬರುತ್ತೆ. ಅದೇ ಸಿಟ್ಟಿನಲ್ಲಿ ಹಿಂದೆ ಮುಂದೆ ಯೋಚಿಸದೆ ವರ್ತಿಸಿ ಕೊನೆಗೆ ಮುಜುಗರಕ್ಕೀಡಾಗಿರುವ ಅದೆಷ್ಟೋ ಘಟನೆಗಳು ನಡೆದಿದೆ. ಇದು ಆಡಳಿತ ನಡೆಸುವ ಒಂದು ವರ್ಗದ ಜನಪ್ರತಿನಿಧಿಗಳ ಹಣೆ ಬರಹ.
ಇನ್ನೊಂದು ವರ್ಗದ ಜನ ಪ್ರತಿನಿಧಿಗಳಿದ್ದಾರೆ. ಅವರು ಇದ್ದದ್ದನ್ನು ಇದ್ದಂತೆಯೇ ಒಪ್ಪಿಕೊಳ್ತಾರೆ. ಸಮಸ್ಯೆ ಮತ್ತು ಅದರ ಸುತ್ತಲೂ ಇರುವ ಅಡೆತಡೆಯನ್ನು ಜನ ಸಾಮಾನ್ಯರ ಮುಂದಿಡುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತಾರೆ. ಅಲ್ಲಿಗೆ ಸಮಸ್ಯೆ ತೀರಿತು ಅನ್ನುವ ಅರ್ಥವಲ್ಲ. ಬದಲಿಗೆ ಜನರಿಗೆ ವಾಸ್ತವತೆ ಅರಿವಾಯಿತು ಅನ್ನುವ ಸಮಾಧಾನ. ಮೇಲಿನ ಎರಡೂ ವಿಚಾರಗಳು ಒಂದಕ್ಕೊಂದು ಭಿನ್ನ, ಒಂದೇ ನಾಣ್ಯದ ಎರಡು ಮುಖಗಳು. ಒಂದನ್ನು ಉದ್ಧಟತನ, ಅಹಂಭಾವದ ಪರಮಾವಧಿ ಎನ್ನುವುದಾದರೆ ಮತ್ತೊಂದನ್ನು ಜವಾಬ್ದಾರಿ, ಕರ್ತವ್ಯ ನಿಷ್ಠೆ ಅನ್ನಬಹುದು. ಇಂದಿನ ದಿನಗಳಲ್ಲಿ ಬಹುತೇಕ ರಾಜಕಾರಣಿಗಳು ಉದ್ಧಟತನದ ಉತ್ತರ ಕೊಡುವವರೇ ನಮ್ಮ ನಡುವೆಯಿರುವುದು ವಿಪರ್ಯಾಸವೇ ಸರಿ. ಎಲ್ಲೋ ಅಲ್ಲಿ ಇಲ್ಲಿ ಕೆಲವೇ ಕೆಲವು ರಾಜಕಾರಣಿಗಳಷ್ಟೇ ಇಂದಿಗೂ ಸಾರ್ವಜನಿಕವಾಗಿ ಪ್ರಬುದ್ಧತೆಯಿಂದ ವರ್ತಿಸುತ್ತಿದ್ದಾರೆ.
ಇಷ್ಟೆಲ್ಲ ಹೇಳುವುದಕ್ಕೆ ಒಂದೇ ಒಂದು ಕಾರಣ. ಕಳೆದ ಕೆಲವು ವರ್ಷಗಳಿಂದ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ರಾಶಿ ಬಿದ್ದಿರುವ ಕಸ. ಮೊನ್ನೆ ತನಕ ಸುಳ್ಯಕ್ಕೆ ಮಾತ್ರ ಸೀಮಿತವಾಗಿದ್ದ ಈ ಕಸದ ರಾಶಿಯ ಸಮಸ್ಯೆ ಒಂದು ರಾತ್ರಿ ಬೆಳಗಾಗುವುದರೊಳಗೆ ರಾಜ್ಯ ವ್ಯಾಪಿ ಸದ್ದು ಮಾಡಿದೆ. ಖ್ಯಾತ ನಟ ದಿವಂಗತ ವಿಷ್ಣುವರ್ಧನ್ ಅವರ ಅಳಿಯ, ಜೊತೆ ಜೊತೆಯಲಿ ಸೀರಿಯಲ್ ನ ನಾಯಕ ನಟ ಅನಿರುದ್ಧ್ ಜಾಲತಾಣದಲ್ಲಿ ಸಮಸ್ಯೆಯ ಬಗ್ಗೆ ಮಾತನಾಡುತ್ತಿದ್ದಂತೆ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ನೀಡಿದ ಒಂದು ಅಪ್ರಬುದ್ಧತೆ ಹೇಳಿಕೆ ಬಹಳಷ್ಟು ಜನರಿಂದ ಟೀಕೆಗೆ ಗುರಿಯಾಯಿತು. ಇಲ್ಲಿನ ಕಸದ ಸಮಸ್ಯೆ ನೀಗಿಸುವುದಕ್ಕೆ ಅನಿರುದ್ಧನಿಗೆ ಹತ್ತು ಲಾರಿ ಕಳಿಸಲು ಹೇಳಿ ಎನ್ನುವುದರಿಂದ ಹಿಡಿದು ಪ್ರಚಾರಕ್ಕಾಗಿ ಫೇಸ್ ಬುಕ್ ನಲ್ಲಿ ಹಾಕಿದ್ದನ್ನು ಶೇರ್ ಮಾಡೋದಲ್ಲ ಅನ್ನುವ ಪ್ರತ್ಯುತ್ತರ ನಿಜಕ್ಕೂ ಸುಳ್ಯದಂತಹ ಸಂಸ್ಕೃತಿಯ ನೆಲದಿಂದ ಬಂದಿರುವ ಯಾವುದೇ ನಾಯಕನಿಂದ ನಿರೀಕ್ಷಿಸುವುದು ಕಷ್ಟ.
ವಿನಯ್ ಅವರು ಸಾಮಾಜಿಕ ಜಾಲತಾಣದಲ್ಲಿ ನೀಡಿರುವ ಎಲ್ಲ ಪ್ರಶ್ನೆಗಳಿಗೂ ಅನಿರುದ್ಧ್ ಸಮಾಧಾನದಿಂದ ಉತ್ತರ ನೀಡಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಅವರು ನಟಿಸುತ್ತಿರುವ ಜೊತೆಜೊತೆಯಲ್ಲಿ ಧಾರವಾಹಿಯಲ್ಲೇ ಕಸದ ಸಮಸ್ಯೆಗಳ ಬಗೆಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಿಸಿದ್ದರು. ಸ್ವಚ್ಛ ಭಾರತ್ ಕಲ್ಪನೆ ಬಗ್ಗೆ ಸಾಕಷ್ಟು ಕಾಳಜಿಯಿಂದ ಕೆಲಸ ನಿರ್ವಹಿಸುತ್ತಿರುವ ಅನಿರುದ್ಧ್ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಮನಸ್ಸು ಮಾಡಿದ್ದರೆ ವಿನಯ್ ಅವರಂತೆಯೇ ಜಾಲತಾಣದಲ್ಲಿ ಆಕ್ರೋಶದಲ್ಲಿ ಅವರೂ ಮಾತನಾಡಬಹುದಿತ್ತು. ಸಮಸ್ಯೆ ಸರಿಪಡಿಸಲಾಗದ ನೀವು ಅಧ್ಯಕ್ಷ ಸ್ಥಾನದಲ್ಲಿದ್ದೂ ವೇಸ್ಟು…ಮೊದಲು ರಾಜೀನಾಮೆ ಕೊಟ್ಟು ಮನೆಗೆ ನಡೆಯಿರಿ. ನಿಮಗ್ಯಾಕೆ ಬೇಕು ಆ ಪಟ್ಟ? ಎಂದು ತಿರುಗಿಸಿ ಕೇಳಬಹುದಿತ್ತು. ಆದರೆ ಅನಿರುದ್ಧ್ ಅಪ್ಪಿ ತಪ್ಪಿಯೂ ಅಂತಹ ಪದ ಬಳಕೆ ಮಾಡಲಿಲ್ಲ. ಬದಲಿಗೆ ಹತ್ತು ಲಾರಿ ನಾನೇ ಕಳಿಸಿಕೊಡುತ್ತೇನೆ ಎನ್ನುವ ಮೂಲಕ ಮೇರು ವ್ಯಕ್ತಿತ್ವ ಪ್ರದರ್ಶಿಸಿದ್ದರು. ವಾಸ್ತವವಾಗಿ ಅನಿರುದ್ಧ್ ನೀಡಿರುವ ಈ ಉತ್ತರಗಳು ನಗರ ಪಂಚಾಯತ್ ಅಧ್ಯಕ್ಷರ ಉದ್ಧಟತನವನ್ನು ತೊಳೆದು ಹಾಕಿರಬಹುದು ಎಂದು ಭಾವಿಸೋಣ. ಕಸದ ಸಮಸ್ಯೆಯ ವಿಚಾರ ಅತ್ಯಂತ ಸೂಕ್ಷ್ಮ. ಇದನ್ನು ನಿವಾರಿಸುವುದು ಎಷ್ಟು ಸವಾಲಿನ ಕೆಲಸ ಅನ್ನುವುದನ್ನು ಜನತೆ ಮುಂದಿಟ್ಟು ಸಹನೆ, ಸಂಯಮದಿಂದ ವರ್ತಿಸಿದಾಗ ಮಾತ್ರ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬಹುದಾಗಿದೆ.