ನ್ಯೂಸ್ ನಾಟೌಟ್: ಪ್ರೀತಿ ಹೆಸರಲ್ಲಿ ಕಪಟ ನಾಟಕವಾಡಿ ಅಪ್ರಾಪ್ತ ಬಾಲಕಿಯನ್ನು ಸುಳ್ಯದ ಲಾಡ್ಜ್ ಗೆ ಕರೆ ತಂದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮಂಡೆಕೋಲಿನ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡೆಕೋಲಿನ ಅಂಬ್ರೋಟಿ ಕಕ್ಕಾಜೆ ಬೋಜಪ್ಪ ಎಂಬವರ ಪುತ್ರ ಅಶ್ವಿನ್ ಬಂಧಿತ ಯುವಕ. ಈತ ಮುರುಳ್ಯ ಗ್ರಾಮದ ಪಿ.ಯು.ಸಿ.ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡಿದ್ದ, ಆಕೆಯಿಂದ ಫೋನ್ ನಂಬರ್ ಪಡೆದುಕೊಂಡು ನಿರಂತರ ಫೋನ್ ಮಾಡುತ್ತಿದ್ದ, ಬಳಿಕ ಒಂದು ದಿನ ಆಕೆಯನ್ನು ಸುಳ್ಯಕ್ಕೆ ಬರುವಂತೆ ಒತ್ತಾಯಿಸಿದ್ದಾನೆ. ಆಕೆ ಆತನ ಮಾತು ನಂಬಿ ಸುಳ್ಯಕ್ಕೆ ಬಂದಿದ್ದಾಳೆ. ಈ ವೇಳೆ ಆತ ಆಕೆಯನ್ನು ಸುಳ್ಯದ ಲಾಡ್ಜ್ ವೊಂದಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಚಾರ ಮನೆಯವರಿಗೆ ತಿಳಿದು ಬಾಲಕಿಯ ತಾಯಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಶ್ವಿನ್ ನನ್ನು ಬಂಧಿಸಲಾಗಿದೆ. ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವರದಿಯಾಗಿದೆ. ಇನ್ನೂ ಶಾಲಾ-ಕಾಲೇಜು ಮಟ್ಟದಲ್ಲಿರುವ ಹೆಣ್ಣು ಮಕ್ಕಳಿಗೆ ಮೊಬೈಲ್ ಕೊಡುವ ಪ್ರತಿ ಪೋಷಕರು ಕೂಡ ಯೋಚಿಸಿ ತಮ್ಮ ಮಕ್ಕಳಿಗೆ ಮೊಬೈಲ್ ನೀಡಬೇಕಿದೆ. ಮಕ್ಕಳು ಮೊಬೈಲ್ ನಲ್ಲಿ ಏನು ಮಾಡುತ್ತಾರೆ ಅನ್ನುವುದನ್ನು ಕೂಡ ಪೋಷಕರು ಗಮನಿಸಬೇಕಾದ ಅನಿವಾರ್ಯತೆ ಇದೆ.