ನ್ಯೂಸ್ ನಾಟೌಟ್: ಪೆಟ್ರೋಲಿಯಂ ಉತ್ಪನ್ನಗಳ ದರ ದಿಢೀರ್ ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ಮಾಲೀಕರಿಗೆ ನಷ್ಟ ಉಂಟಾಗಿದ್ದು ಅಖಿಲ ಕರ್ನಾಟಕ ಪೆಟ್ರೋಲಿಯಂ ಮಾರಾಟಗಾರರ ಒಕ್ಕೂಟವು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ.31 ರಂದು ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.
ಮೇ.31ರಂದು ಡಿಪೋಗಳಿಂದ ತೈಲ ಖರೀದಿಸದೆ ಪ್ರತಿಭಟನೆ ನಡೆಸಲು ಅಖಿಲ ಕರ್ನಾಟಕ ಪೆಟ್ರೋಲಿಯಂ ಮಾರಾಟಗಾರರ ಒಕ್ಕೂಟವು ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿದ ಒಕ್ಕೂಟದ ಅಧ್ಯಕ್ಷ ಕೆ.ಎಂ.ಬಸವೇಗೌಡ ಅವರು, ಕೇಂದ್ರ ಸರ್ಕಾರ ಕಳೆದ ವಾರ ದಿಢೀರ್ ರೂ.10ರವರೆಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ದರವನ್ನು ಕಡಿತ ಮಾಡಿತ್ತು. ಇದರಿಂದ ಹಿಂದಿನ ದಿನವೇ ಸಾವಿರಾರು ಲೀಟರ್ ತೈಲ ಖರೀದಿಸಿಟ್ಟಿದ್ದ ಪ್ರತಿ ಬಂಕ್ ಗಳಿಗೆ ಕನಿಷ್ಟ ರೂ.5 ರಿಂದ 25 ಲಕ್ಷದವರೆಗೂ ನಷ್ಟವಾಗಿದೆ. ಈ ನಷ್ಟವನ್ನು ಕೇಂದ್ರ ಸರ್ಕಾರ ಭರಿಸಬೇಕು ಎಂದು ಒತ್ತಾಯಿಸಲು 1 ದಿನ ಡಿಪೋಗಳಿಂದ ತೈಲ ಖರೀದಿಸದೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಮೇ 31ರ ಸೋಮವಾರ ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ.