ನ್ಯೂಸ್ ನಾಟೌಟ್: ಈಗಿನ ಕಾಲದಲ್ಲಿ ಜನ ಒಂದು ರೂಪಾಯಿ ನೀಡುವುದಕ್ಕೂ ಹಿಂದು ಮುಂದು ಯೋಚಿಸುತ್ತಾರೆ. ಅಂತಹುದರಲ್ಲಿ ಇಲ್ಲೊಬ್ಬಳು ಅಜ್ಜಿ ಇಳಿ ವಯಸ್ಸಿನಲ್ಲಿ ಭಿಕ್ಷೆ ಬೇಡಿ ಸಂಗ್ರಹಗೊಂಡ ಹಣವನ್ನು ಅನ್ನದಾನಕ್ಕಾಗಿ ದೇವಸ್ಥಾನಕ್ಕೆ ನೀಡಿ ಸುದ್ದಿಯಾಗಿದ್ದಾರೆ.
80ರ ಇಳಿ ವಯಸ್ಸು, ಸುಕ್ಕು ಗಟ್ಟಿದ ಬಡಕಲು ದೇಹ. ಈಕೆಯ ಹೆಸರು ಅಶ್ವತ್ಥಮ್ಮ . ಮೂಲತಃ ಉಡುಪಿ ಜಿಲ್ಲೆಯ ತ್ರಾಸಿ ಸಮೀಪದ ಕಂಚುಗೋಡು ನಿವಾಸಿ. ಕಳೆದ ಹಲವಾರು ವರ್ಷಗಳಿಂದ ಮಂಗಳೂರಿನ ರಾಜರಾಜೇಶ್ವರಿ ದೇವಸ್ಥಾನದ ಮುಂಭಾಗ ಭಿಕ್ಷೆ ಬೇಡುತ್ತಿದ್ದಾರೆ. ಭಕ್ತರು ನೀಡುವ ಅಷ್ಟು ಹಣವನ್ನು ಜೋಪಾನವಾಗಿ ತೆಗೆದಿಟ್ಟು ಬೇರೆ ಬೇರೆ ದೇವಸ್ಥಾನಗಳ ಅಭಿವೃದ್ಧಿಗೆ ಕೊಡುತ್ತಿದ್ದಾರೆ. ಅನ್ನದಾನಕ್ಕೆ ತನ್ನ ಹಣ ವಿನಿಯೋಗವಾಗುತ್ತಿರುವುದಕ್ಕೆ ಅಜ್ಜಿಗೆ ಖುಷಿ. ಇದುವರೆಗೆ ಅಜ್ಜಿ ಬರೋಬ್ಬರಿ 9 ಲಕ್ಷಕ್ಕೂ ಹೆಚ್ಚು ಹಣವನ್ನು ವಿವಿಧ ದೇವಸ್ಥಾನಕ್ಕೆ ನೀಡಿದ್ದಾರೆ.
ಅಶ್ವತ್ಥಮ್ಮ ಬೆಳಗ್ಗೆಯಿಂದ ಸಂಜೆ ತನಕ ಭಿಕ್ಷೆ ಬೇಡಿ ಸಂಗ್ರಹವಾದ ಹಣವನ್ನು ನಿತ್ಯ ಪಿಗ್ಮಿಗೆ ಕಟ್ಟುತ್ತಾರೆ. ಲಕ್ಷ ರು. ಜಮೆಯಾದ ಬಳಿಕ ಅದನ್ನು ದೇವಸ್ಥಾನದ ಅನ್ನದಾನಕ್ಕೆ ನೀಡುತ್ತಾರೆ. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನಕ್ಕೆ ೧ ಲಕ್ಷ ರೂ. , ಪೊಳಲಿ ಅಖಿಲೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ವೃತಾಧಾರಿಗಳಿಗೆ ಒಂದೂವರೆ ಲಕ್ಷ ರೂ. ಗಂಗೊಳ್ಳಿ ದೇವಸ್ಥಾನದಲ್ಲಿ ಅನ್ನದಾನ ಸೇರಿದಂತೆ ಹಲವು ದೇವಸ್ಥಾನಗಳಿಗೆ ಹಣ ನೀಡಿದ್ದಾರೆ.