ಚೆನ್ನೈ: ಮದುವೆ ಸಮಾರಂಭಕ್ಕೆ ತೆರಳಿದ್ದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ತುರ್ತು ಸನ್ನಿವೇಶದಲ್ಲಿ ಅಲ್ಲಿಂದಲೇ ವಾಟ್ಸಅಪ್ ನಲ್ಲೇ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಅಪರೂಪದ ಪ್ರಸಂಗ ತಮಿಳುನಾಡಿನಲ್ಲಿ ನಡೆದಿದೆ.
ವಿವಾಹ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಭಾನುವಾರ ನಾಗರಕೊಯಿಲ್ ಗೆ ತೆರಳಿದ್ದರು. ಅದೇ ಸಂದರ್ಭದಲ್ಲಿ ಧರ್ಮಪುರಿಯ ಶ್ರೀ ಅಭೀಷ್ಟ ವರದರಾಜ ಸ್ವಾಮಿ ದೇಗುಲದ ಆನುವಂಶಿಕ ಟ್ರಸ್ಟಿ ಪಿ.ಆರ್.ಶ್ರೀನಿವಾಸನ್ ಪರ ವಕೀಲರು ರಿಟ್ ಅರ್ಜಿ ಸಲ್ಲಿಸಿದ್ದರು. ದೇಗುಲದ ರಥೋತ್ಸವ ಸೋಮವಾರ ನಡೆಯಬೇಕಿದ್ದು, ಸರಕಾರದ ಅನುಮತಿ ನೀಡುತ್ತಿಲ್ಲ. ಉತ್ಸವ ನಡೆಯದಿದ್ದರೆ ಗ್ರಾಮಸ್ಥರು ದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ರಿಟ್ ಅರ್ಜಿದಾರರ ಶ್ರದ್ಧಾಪೂರ್ವಕ ಮನವಿಯಿಂದಾಗಿ ನಾಗರಕೊಯಿಲ್ ನ ಮದವೆ ಮನೆಯಿಂದಲೇ ವಾಟ್ಸಅಪ್ ನಲ್ಲೇ ವಿಚಾರಣೆ ನಡೆಸಬೇಕಾದ ಅನಿವಾರ್ಯತೆಗೆ ನನ್ನನ್ನು ದೂಡಿತು ಎಂದು ನ್ಯಾಯಮೂರ್ತಿ ಹೇಳಿದ್ದಾರೆ.