ನ್ಯೂಸ್ ನಾಟೌಟ್: ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ (ಶ್ವಾನ). ನಿಯತ್ತಿನಲ್ಲಿ ಮನುಷ್ಯನಿಗಿಂತ ಎಷ್ಟೋ ಮಿಗಿಲು. ಅಂತಹ ನಾಯಿ ಮರಿಗಳನ್ನು ತಾಯಿಯಿಂದ ಯಾರೋ ಕಿಡಿಗೇಡಿಗಳು ಬೇರ್ಪಡಿಸಿ ಸಂಪಾಜೆಯ ಕೈಪಡ್ಕ ರಸ್ತೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿಗೆ ತಂದು ಬಿಟ್ಟಿದ್ದಾರೆ.ಮೂರು ಮುದ್ದಾದ ಮರಿಗಳನ್ನು ಬಿಟ್ಟು ಹೋಗಲಾಗಿದ್ದು ಅದರಲ್ಲಿ ಒಂದು ಮರಿ ವಾಹನದ ಅಡಿಗೆ ಬಿದ್ದು ಸತ್ತು ಹೋಗಿದೆ. ಉಳಿದ ಎರಡು ಮರಿಗಳು ಎರಡು ದಿನದಿಂದ ಅನ್ನ ನೀರಿಲ್ಲದೆ ಒದ್ದಾಡುತ್ತಿವೆ.
ಇದೇ ವೇಳೆ ನಾಯಿಯ ಕುತ್ತಿಗೆಯಲ್ಲಿ ಯಾರೋ ಫಲಕವನ್ನು ನೇತುಹಾಕಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಒಂದು ನಾಯಿಯ ಕುತ್ತಿಗೆಯಲ್ಲಿ ‘ಮಾಲೀಕರೇ ನಮ್ಮ ಶಾಪ ತಟ್ಟದಿರದು ನಾವು ಮಾಡಿದ ತಪ್ಪಾದರೂ ಏನು?’ ಎನ್ನುವ ಒಕ್ಕಣೆ ಬರೆದಿದೆ. ಮತ್ತೊಂದು ನಾಯಿಯ ಕುತ್ತಿಗೆಯಲ್ಲಿರುವ ಫಲಕದಲ್ಲಿ ‘ನಮ್ಮನ್ನು ಬೀದಿ ಪಾಲು ಮಾಡಿದವರು ಬೀದಿ ಪಾಲಾಗಲಿ’ ಎಂದು ಬರೆದಿದೆ. ಮನುಷ್ಯನೊಂದಿಗೆ ನಾಯಿಯ ಅವಿನಾಭಾವ ಸಂಬಂಧವನ್ನು ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಜಿಮ್ಮಿಗಲ್ಲು ಸಿನಿಮಾದಲ್ಲಿ ನಿರ್ದೇಶಕರು ಅತ್ಯಂತ ಭಾವನಾತ್ಮಕವಾಗಿ ವಿವರಿಸಿದ್ದಾರೆ. ಆ ಸಿನಿಮಾವನ್ನು ನೋಡಿದವರು ಯಾರೋ ಇಂತಹ ಕೃತ್ಯ ಮಾಡಲಾರರು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಮುದ್ದಾದ ಅನಾಥ ನಾಯಿ ಮರಿಗಳನ್ನು ಸಾಕಲು ಇಚ್ಛಿಸುವವರು ಕೈಪಡ್ಕ ರಸ್ತೆಯ ತಿರುವಿನಲ್ಲಿರುವ ಮನೆಯವರನ್ನು ವಿಚಾರಿಸಿದರೆ ಮಾಹಿತಿ ಸಿಗುತ್ತದೆ.