ನ್ಯೂಸ್ ನಾಟೌಟ್: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕಾರ್ಯಕ್ರಮವೊಂದರಲ್ಲಿ ದಲಿತ ಸ್ವಾಮೀಜಿಯವರ ಎಂಜಲು ತಿಂದ ವಿಚಾರ ಈಗ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ಅತಿರೇಕ ಎಂದು ಹೇಳಿದರೆ ಮತ್ತೆ ಕೆಲವರು ಅಸ್ಪೃಶ್ಯತೆಯ ಬಗ್ಗೆ ಅರಿವು ಮೂಡಿಸಲು ಈ ರೀತಿ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಪಾದರಾಯನಪುರದ ಅಲ್ ಅಜರ್ ಫೌಂಡೇಶನ್ ಶಾಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಮತ್ತು ಈದ್ ಮಿಲಾದ್ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಮೀರ್ ಸ್ವಾಮೀಜಿ ಬಾಯಲ್ಲಿದ್ದ ಅನ್ನವನ್ನು ತಿಂದಿದ್ದು, ಈ ಮೂಲಕ ಸೌಹಾರ್ದತೆ ಸಾರುವ ಪ್ರಯತ್ನ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಜಾತಿ, ಧರ್ಮಗಳಿಗೆ ಮಿಗಿಲಾದದ್ದು ಮಾನವೀಯತೆ. ನಮ್ಮೆಲ್ಲರ ಜಾತಿ ಒಂದೇ ಅದುವೇ ಮನುಷ್ಯ ಜಾತಿ. ಮನುಷ್ಯರಾಗಿ ಬಾಳುವುದೇ ನಿಜವಾದ ಧರ್ಮ. ಮನುಷ್ಯ ಸಂಬಂಧಗಳಿಗೆ ಜಾತಿ, ಧರ್ಮ ಎಂದಿಗೂ ಅಡ್ಡಿಯಾಗದು. ನಾವೆಲ್ಲರೂ ಸಹೋದರರಂತೆ ಬಾಳಬೇಕು. ಸ್ವಾಮೀಜಿ ಬಾಯಲ್ಲಿದ್ದ ಅನ್ನ ತಿಂದ ನಾನು ಸತ್ತು ಹೋದೆನಾ ಎಂದು ಜಮೀರ್ ಹೇಳಿದ್ದಾರೆ. ಸ್ವತಃ ಈ ವಿಡಿಯೋವನ್ನು ಜಾಲತಾಣದಲ್ಲಿ ಅವರು ಪ್ರಕಟಿಸಿಕೊಂಡಿದ್ದಾರೆ.