ನ್ಯೂಸ್ ನಾಟೌಟ್: ಕ್ಷುಲ್ಲಕ ವಿಚಾರಕ್ಕೆ ಮನಸ್ತಾಪಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ.
ಬಿಳಿನೆಲೆ ಗ್ರಾಮ ಸೂಡ್ಲು ನಿವಾಸಿ ದುಗ್ಗಪ್ಪ ಗೌಡರ ಪುತ್ರ ಪ್ರಸಾದ್ ಮೃತ ಯುವಕ. ಇವರು ಕೈಕಂಬದಲ್ಲಿ ಶಾಮಿಯಾನ್ ಸರ್ವಿಸ್ ಹೊಂದಿದ್ದರು. ಅದನ್ನು ಮತ್ತೋರ್ವರಿಗೆ ಮಾರಾಟ ಮಾಡಿ ಮನೆಯಲ್ಲೇ ಇದ್ದರು.ಕೆಲ ದಿನಗಳ ಹಿಂದೆ ಕಡಬದ ಅಂಗಡಿಯೊಂದರಲ್ಲಿ ಕೆಲಸಕ್ಕೆ ನಿಯೋಜನೆಗೊಂಡ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನದ ಅವಶ್ಯಕತೆ ಇತ್ತು ಎನ್ನಲಾಗಿದೆ. ಇತ್ತ ಮನೆಯಲ್ಲಿ ಹಳೆಯ ಬೈಕ್ ಇದ್ದು, ಅದನ್ನು ತನಗೆ ನೀಡುವಂತೆ ಪ್ರಸಾದ್ ತನ್ನ ಮನೆಯವರ ಬಳಿ ಕೇಳಿದ್ದ ಎನ್ನಲಾಗಿದೆ.
ಆದರೆ ಇನ್ಶುರೆನ್ಸ್ ವಾಯ್ದೆ ಕಳೆದಿದ್ದರಿಂದ ಎರಡು ದಿನಗಳ ಕಾಲ ಕಾಯುವಂತೆ ಮನೆಯವರು ಪ್ರಸಾದ್ ಗೆ ಮನವಿ ಮಾಡಿದ್ದು, ಆದರೆ ಬೈಕ್ ನೀಡದ ಸಿಟ್ಟಿನಲ್ಲಿ ಎಲ್ಲರ ಮುಂದೆಯೇ ಮನೆಯಲ್ಲಿದ್ದ ಇಲಿಪಾಷಾಣ ಸೇವಿಸಿದ್ದ ಎನ್ನಲಾಗಿದೆ.ಆದರೆ ಕೂಡಲೇ ಆತನನ್ನು ತಡೆಯಲು ಮನೆಯವರು ಯತ್ನಿಸಿದ್ದರೂ ಪ್ರಸಾದ್ ಯಾರೂ ಕೂಡ ತನ್ನನ್ನು ಮುಟ್ಟಲು ಬಿಟ್ಟಿರಲಿಲ್ಲ ಎನ್ನಲಾಗಿದೆ. ಕೊನೆಗೂ ಆತನನ್ನು ಪುತ್ತೂರಿನ ಆಸ್ಪತ್ರೆಯೊಂದರಲ್ಲಿ ಎರಡು ದಿನಗಳ ಕಾಲ ಚಿಕಿತ್ಸೆ ನೀಡಿ, ಬಳಿಕ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.