ನ್ಯೂಸ್ ನಾಟೌಟ್ : ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯ (ಐಸಿಡಿಎಸ್) ಮೂಲಕ ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಪೂರೈಸುತ್ತಿರುವ ಕಳಪೆ ಗುಣಮಟ್ಟದ ಆಹಾರವನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಸಂಬಂಧ ಬಾಗಲಕೋಟೆಯ ಸಂಗೀತಾ ಗದಗಿನ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ. ಪರಿಷ್ಕೃತ ಪೌಷ್ಟಿಕಾಂಶ ಮತ್ತು ಆಹಾರ ಮಾನದಂಡಗಳಿಗೆ ಅನುಗುಣವಾಗಿಲ್ಲದ ಆಹಾರ ಉತ್ಪನ್ನಗಳನ್ನುಯಾವುದೇ ಕಾರಣಕ್ಕೂ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡಬಾರದು. ಕೇಂದ್ರ ಸರ್ಕಾರದ ಪರಿಷ್ಕೃತ ಮಾನದಂಡಗಳ ಪ್ರಕಾರವೇ ಗುಣಮಟ್ಟದ ಆಹಾರ ಪೂರೈಸಬೇಕು. ಈ ದಿಸೆಯಲ್ಲಿ ಎಲ್ಲ ಕ್ರಮ ಕೈಗೊಳ್ಳಬೇಕು. ಐಸಿಡಿಎಸ್ ಯೋಜನೆಯನ್ನು ರಾಜ್ಯದಾದ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು‘ ಎಂದು ನ್ಯಾಯಪೀಠವು ಆದೇಶಿಸಿದೆ.
ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕಆಹಾರ ತಯಾರಿಸಿ ಪೂರೈಸಲು ನಿಯೋಜಿಸಿರುವ ಮಹಿಳಾ ಪೂರಕ ಪೌಷ್ಟಿಕಾಂಶ ಉತ್ಪಾದನಾ ತರಬೇತಿ ಕೇಂದ್ರಗಳು, ಪೌಷ್ಟಿಕ ಆಹಾರದ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಬಿಐಎಸ್ (ಭಾರತೀಯ ಗುಣಮಟ್ಟ ಮಾನಕ ಬ್ಯೂರೊ) ಪ್ರಮಾಣೀಕರಿಸಿದ ಅಥವಾ ಪರವಾನಗಿ ಪಡೆದ ಮಹಿಳಾ ಸ್ವ-ಸಹಾಯ ಗುಂಪುಗಳ ಸಹಾಯ ಪಡೆಯವುದನ್ನು ಕಡ್ಡಾಯಗೊಳಿಸಿ ಕೇಂದ್ರ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯ ಅನುಸಾರ ರಾಜ್ಯ ಸರ್ಕಾರ ಚಾಚೂ ತಪ್ಪದೆ ನಡೆದುಕೊಳ್ಳಬೇಕು ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.