ನ್ಯೂಸ್ ನಾಟೌಟ್: ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಿನ್ನ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮೆರೆದ ಭಾರತದ ಸಾಧನೆಯನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಆದರೆ ಇಲ್ಲೊಬ್ಬರು ಐಎಎಸ್ ಅಧಿಕಾರಿ ಭಾರತ ತಂಡದ ಸಾಧನೆ ಕುರಿತು ‘ಸೊಳ್ಳೆ ಬ್ಯಾಟ್’ ಚಿತ್ರವನ್ನು ಬಳಸಿ ಟ್ವೀಟ್ ಮಾಡಿ ವಿವಾದಕ್ಕೆ ಕಾರಣವಾಗಿದ್ದಾರೆ. ಇಂತಹ ಕಳಪೆ ಟ್ವಿಟ್ ಗೆ ಕೆಂಡಾ ಮಂಡಲವಾಗಿರುವ ಕ್ರಿಕೆಟಿಗ ಅಮಿತ್ ಮಿಶ್ರಾ ಐಎಎಸ್ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಬ್ಯಾಡ್ಮಿಂಟನ್ನಲ್ಲಿ ಭಾರತ ತಂಡವು ತಮಗಿಂತ ಹೇಗೆ ಉತ್ತಮಗೊಂಡಿದೆ ಎಂಬುದರ ಬಗ್ಗೆ ಇಂಡೋನೇಷ್ಯಾವು ಆಶ್ಚರ್ಯಗೊಂಡಿದೆ’ ಎಂದು ಟ್ವೀಟ್ ಮಾಡಿರುವ ಐಎಎಸ್ ಅಧಿಕಾರಿ ಸೋಮೇಶ್ ಉಪಾಧ್ಯಾಯ ಅವರು ಸೊಳ್ಳೆ ಹೊಡೆಯುವ ಬ್ಯಾಟ್ ಚಿತ್ರವನ್ನು ಟ್ವೀಟ್ ನಲ್ಲಿ ಪ್ರಕಟಿಸಿದ್ದಾರೆ.
ಸೋಮೇಶ್ ಉಪಾಧ್ಯಾಯ ಅವರ ಟ್ವೀಟ್ ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಅಮಿತ್ ಮಿಶ್ರಾ, ‘ಇದು ಕೇವಲ ಅಸಹ್ಯಕರ ಮಾತ್ರವಲ್ಲ, ನಮ್ಮ ಬ್ಯಾಡ್ಮಿಂಟನ್ ಹೀರೋಗಳ ಸಾಧನೆಗೆ ಮಾಡಿದ ಅವಮಾನ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಹದಿನಾಲ್ಕು ಬಾರಿಯ ಚಾಂಪಿಯನ್ ಇಂಡೊನೇಷ್ಯಾವನ್ನು ಸೋಲಿಸಿದ ಭಾರತ ತಂಡ ಮೊದಲ ಬಾರಿ ಚಿನ್ನದ ಪದಕ ಗಳಿಸಿದೆ.